ಚಡಗ ಕಾದಂಬರಿ ಪ್ರಶಸ್ತಿಗೆ 'ಜೀವರತಿ' ಆಯ್ಕೆ

ಚಡಗ ಕಾದಂಬರಿ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿ ಜ.ನಾ. ತೇಜಶ್ರೀ.
ಚಡಗ ಕಾದಂಬರಿ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿ ಜ.ನಾ. ತೇಜಶ್ರೀ.
Published on: 

* ಜ.ನಾ. ತೇಜಶ್ರೀ ವಿರಚಿತ ಕೃತಿ

ಉಡುಪಿ: ಕೋಟೇಶ್ವರದ ಎನ್​ಆರ್​ಎಎಂಎಚ್​ ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ವತಿಯಿಂದ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗ ಅವರ ಸ್ಮರಣಾರ್ಥ ನೀಡಲಾಗುವ 'ಚಡಗ ಕಾದಂಬರಿ ಪ್ರಶಸ್ತಿ'ಯ 17ನೇ ವರ್ಷದ ಪುರಸ್ಕಾರಕ್ಕೆ ಸಾಹಿತಿ ಜ.ನಾ. ತೇಜಶ್ರೀ ಅವರ 'ಜೀವರತಿ' ಕಾದಂಬರಿ ಆಯ್ಕೆಯಾಗಿದೆ.

ಈ ಕಾದಂಬರಿಯು ಶತಮಾನದ ದೀರ್ಘಾವಧಿಯ ಒಂದು ಮನೆತನದ ಕೈಫಿಯತ್ತಿನಂತೆ ಆರಂಭವಾಗಿ, ಕೊಡಗಿನ ಒಕ್ಕಲಿಗ ಸಮುದಾಯದ ಒಟ್ಟು ಕಥೆಯಂತೆ, ಕುವೆಂಪು ಅವರ ಕಾದಂಬರಿಗಳನ್ನು ನೆನಪಿಸುವ ಅಗಾಧತೆ ಹೊಂದಿದೆ.

ಪ್ರಕೃತಿಯ ದಟ್ಟವರ್ಣನೆಯ ಸೊಬಗು, ಯಾವ ಚೌಕಟ್ಟಿಗೂ ಬದ್ಧವಾಗದೆ ಬಂದು ಹೋಗುವ ನೂರಾರು ಪಾತ್ರಗಳ ನಡುವೆ ಜೀವಯಾನವನ್ನೇ ಪಥವಾಗಿಸಿಕೊಳ್ಳುವ ವಿಶಿಷ್ಟತೆ ಹೊಂದಿದೆ. ಕಾವ್ಯಾತ್ಮಕ ಭಾಷೆಯಿಂದ ಒಂದು ಸಮಾಜದ ಚರಿತ್ರೆಯೂ ಆಗಿಬಿಡುವ ಸೊಗಸು ಈ ಕಾದಂಬರಿಯಲ್ಲಿ ಇರುವುದನ್ನು ಮೂವರು ತೀರ್ಪುಗಾರರ ಸಮಿತಿ ಗುರುತಿಸಿ 'ಚಡಗ' ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸ್ಪರ್ಧೆಯ ಸಂಚಾಲಕ ಪ್ರೊ. ಉಪೇಂದ್ರ ಸೋಮಯಾಜಿ ತಿಳಿಸಿದ್ದಾರೆ.

ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಹತ್ತು ಸಾವಿರ ರೂ. ನಗದು ಬಹುಮಾನ ಒಳಗೊಂಡ ಈ ಪ್ರಶಸ್ತಿಯನ್ನು ಡಿಸೆಂಬರ್​ ತಿಂಗಳಲ್ಲಿ ಕೋಟದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಜ.ನಾ. ತೇಜಶ್ರೀ ಅವರಿಗೆ ಪ್ರದಾನಿಸಲಾಗುವುದು ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ. ಎನ್​.ಭಾಸ್ಕರ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.