ಅಸಂಖ್ಯಾತ ಯುವ ನಾಯಕರನ್ನು ವ್ಯಕ್ತಿತ್ವ ವಿಕಸನ, ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಿದ ಕೀರ್ತಿ ಜೆಸಿಐ ಸಂಸ್ಥೆಗೆ ಸಲ್ಲುತ್ತದೆ. ಜೀವನದಲ್ಲಿ ನಾವೆಷ್ಟು ಗಳಿಸಿದ್ದೇವೆ ಎನ್ನುವುದಕ್ಕಿಂತ ನಾವೇನು ಸಾಧಿಸಿದ್ದೇವೆ ಎಂಬ ಮಾತಿಗೆ ಅನ್ವರ್ಥವಾಗುವಂತೆ ಸಾಮಾಜಿಕ ಸೇವೆ ಮಾಡುತ್ತಿರುವ ಜೆಸಿಐ ಇತರರಿಗೆ ಮಾದರಿ ಎಂದು ಬ್ರಹ್ಮಕುಮಾರಿ ಭಗಿನಿ ಬಿ.ಕೆ.ದೀಪಾ ಹೇಳಿದರು.
ಇಲ್ಲಿನ ಶ್ರೀ ಶಾರದಾ ವೇದಿಕೆಯಲ್ಲಿ ನಡೆದ ಜೆಸಿಐ ಬೈಂದೂರು ಸಿಟಿ ಜೆಸಿ ಸಂಭ್ರಮ ಶಿವಶಕ್ತಿ ಉದ್ಘಾಟಿಸಿ ಮಾತನಾಡಿದರು.
ಘಟಕ ಅಧ್ಯಕ್ಷ ರಾಜು ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಜೀವ ವಿಮಾ ನಿಗಮದ ಸಹಾಯಕ ಶಾಖಾ ಪ್ರಬಂಧಕ ರಾಮ ಮೊಗವೀರ ಅವರಿಗೆ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ನಿಕಟಪೂರ್ವ ಜೆಸಿಐ ವಲಯಾಧ್ಯಕ್ಷ ಅಭಿಲಾಷ್ ಪಿ.ವಿ., ಜಿಪಂ ಮಾಜಿ ಸದಸ್ಯ ಎಸ್.ಮದನ ಕುಮಾರ್ ಉಪ್ಪುಂದ, ಉದ್ಯಮಿ ಶಿರೂರು ಪ್ರಸಾದ ಪ್ರಭು, ಅನಿತಾ ಆರ್.ಕೆ., ವೀರೇಂದ್ರ ಪೂಜಾರಿ, ರಾಮ ಮೊಗವೀರ, ಕವಿತಾ ಎನ್.ಶೇಟ್ ಇದ್ದರು.
ಚೈತ್ರಾ ಎಸ್. ನಿರೂಪಿಸಿದರು. ಕಾರ್ಯದರ್ಶಿ ರಾಘವೇಂದ್ರ ಸೂರ್ಕುಂದ ವಂದಿಸಿದರು.