ಡಿ.2ರಂದು ಜೈ ಬಾಪು, ಜೈ ಭೀಮ್​ ಸಮಾವೇಶ

ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ್​ ಸೊರಕೆ.
ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ್​ ಸೊರಕೆ.
Published on

ಅಜ್ಜರಕಾಡು ಪುರಭವನದಲ್ಲಿ ಕಾರ್ಯಕ್ರಮ ಆಯೋಜನೆ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್​ ಪ್ರಚಾರ ಸಮಿತಿ ಆಶ್ರಯದಲ್ಲಿ ಜಿಲ್ಲಾ ಕಾಂಗ್ರೆಸ್​ ಸಮಿತಿಯ ಸಹಕಾರದಲ್ಲಿ ಡಿ.2ರಂದು ಬೆಳಗ್ಗೆ 10:30ಕ್ಕೆ ಅಜ್ಜರಕಾಡು ಪುರಭವನದಲ್ಲಿ ಜೈ ಬಾಪು, ಜೈ ಭೀಮ್​, ಜೈ ಸಂವಿಧಾನ ಸಮಾವೇಶ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ್​ ಸೊರಕೆ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ನ.29) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್​ ಅಧಿವೇಶನದ 100ರ ಸಂಭ್ರಮದ ಸ್ಮರಣಾರ್ಥ ಜಿಲ್ಲಾ ಪ್ರಚಾರ ಸಮಿತಿಗಳ ಆಶ್ರಯದಲ್ಲಿ ಆಯಾ ಜಿಲ್ಲೆಗಳಲ್ಲಿ ನಡೆಯಲಿದೆ. ಡಿಸೆಂಬರ್​ ತಿಂಗಳ ಕೊನೆಯವರೆಗೂ ರಾಜ್ಯದ ಎಲ್ಲ 35 ಜಿಲ್ಲೆಗಳಲ್ಲೂ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದರು.

ಒಂದು ದಿನದ ತರಬೇತಿ

ಗಾಂಧೀಜಿ, ಅಂಬೇಡ್ಕರ್​ರ ತತ್ವ ಸಿದ್ಧಾಂತದ ಕುರಿತು ಹಾಗೂ ಕೇಂದ್ರದ ಬಿಜಿಪಿ ಸರ್ಕಾರವು ಚುನಾವಣಾ ಆಯೋಗದ ಸಹಕಾರದಿಂದ ನಡೆಸುತ್ತಿರುವ ವೋಟ್​ ಚೋರಿ ಕುರಿತಾಗಿಯೂ ಇನ್ನಷ್ಟು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ. ರಾಜ್ಯದ 59 ಸಾವಿರ ಬೂತ್​ಗಳಲ್ಲಿ ತಲಾ ಇಬ್ಬರಂತೆ 1.18 ಲಕ್ಷ ಪ್ರತಿನಿಧಿಗಳನ್ನು ಆಯ್ಕೆ ಮಾಡಿ, ಅವರಿಗೆ ಒಂದು ದಿನದ ತರಬೇತಿಯನ್ನೂ ನೀಡಲಾಗುವುದು ಎಂದು ಸೊರಕೆ ತಿಳಿಸಿದರು.
ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಅಲೆವೂರು ಹರೀಶ್​ ಕಿಣಿ ಮಾತನಾಡಿ, ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್​, ಪ್ರಚಾರ ಸಮಿತಿಯ ಉಪಾಧ್ಯಕ್ಷ ಮುನೀರ್​ ಜನ್ಸಾಲೆ, ಕೆಪಿಸಿಸಿ ವಕ್ತಾರ ಸುಧೀರ್​ ಮರೋಳಿ, ಮುಖ್ಯ ಸಂಯೋಜಕ ಹಾಗೂ ಚಲನಚಿತ್ರ ನಿರ್ದೇಶಕ ಎಸ್​. ನಾರಾಯಣ, ಮಾಜಿ ಸಚಿವ ಜಯಪ್ರಕಾಶ್​ ಹೆಗ್ಡೆ, ಕಾರ್ಯಾಧ್ಯಕ್ಷ ಮಂಜುನಾಥ್​ ಭಂಡಾರಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್​ ಪೂಜಾರಿ ಮುದ್ರಾಡಿ, ಜಿಲ್ಲಾ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷ ಅಶೋಕಕುಮಾರ್​ ಕೊಡವೂರು, ಕೆಪಿಸಿಸಿ ವಕ್ತಾರ ಸುಧೀರ್​ ಮರೋಳಿ ಸೇರಿದಂತೆ ಎಲ್ಲ ಸಮಿತಿಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಸಮಾವೇಶದಲ್ಲಿ 1,500ರಷ್ಟು ಕಾಂಗ್ರೆಸ್​ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಕಾಪು ಬ್ಲಾಕ್​ ಅಧ್ಯಕ್ಷ ಅಖಿಲೇಶ್​ ಕೋಟ್ಯಾನ್​, ಉಡುಪಿ ಬ್ಲಾಕ್​ ಅಧ್ಯಕ್ಷ ಪ್ರಶಾಂತ್​ ಪೂಜಾರಿ, ಬ್ರಹ್ಮಾವರ ಬ್ಲಾಕ್​ ಅಧ್ಯಕ್ಷ ರಾಜೇಶ್​ ಶೆಟ್ಟಿ, ಜಿಲ್ಲಾ ಕಾಂಗ್ರೆಸ್​ ಉಪಾಧ್ಯಕ್ಷ ದಿನಕರ ಶೆಟ್ಟಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net