ಐಟಿಐ ಕಟ್ಟಡ ಕಾಡುಪಾಲು!

 ಗಿಡಗಂಟಿಗಳು ಬೆಳೆದು ಪಾಳುಬಿದ್ದಿರುವ ಕಡೇಶಿವಾಲಯದ ಕೈಗಾರಿಕಾ ತರಬೇತಿ ಮತ್ತು ಸೇವಾ ಕೇಂದ್ರ.
ಗಿಡಗಂಟಿಗಳು ಬೆಳೆದು ಪಾಳುಬಿದ್ದಿರುವ ಕಡೇಶಿವಾಲಯದ ಕೈಗಾರಿಕಾ ತರಬೇತಿ ಮತ್ತು ಸೇವಾ ಕೇಂದ್ರ.
Published on
ಸಂದೀಪ್ ಸಾಲ್ಯಾನ್ ಬಂಟ್ವಾಳ
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಅವಶ್ಯಕತೆ ಮನಗಂಡು ಆರಂಭಿಸಿದ ಕೈಗಾರಿಕಾ ತರಬೇತಿ ಕೇಂದ್ರವೊಂದು ಪಾಳುಬಿದ್ದಿದ್ದು ಕಾಡಿನ ಮಧ್ಯೆ ಅನಾಥವಾಗಿದೆ. ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಲೆಂದು ಲಕ್ಷಾಂತರ ರೂಪಾಯಿ ವ್ಯಯಿಸಿ ಅನುಷ್ಠಾನಗೊಳಿಸಿದ ತರಬೇತಿ ಯಂತ್ರಗಳು ಕಂಡವರ ಪಾಲಾಗಿವೆ. ಇಲ್ಲೊಂದು ಶಿಕ್ಷಣ ಸಂಸ್ಥೆ ಇತ್ತು ಎಂಬುದಕ್ಕೆ ಕುರುಹುಗಳಾಗಿ ಕಟ್ಟಡದ ಅವಶೇಷಗಳಷ್ಟೇ ಉಳಿದಿವೆ.

ದ.ಕ. ಜಿಲ್ಲಾ ಪಂಚಾಯಿತಿಯ ಕೈಗಾರಿಕಾ ವಿಭಾಗದ ವತಿಯಿಂದ ಬಂಟ್ವಾಳ ತಾಲೂಕಿನ ಕಡೇಶಿವಾಲಯದಲ್ಲಿ ನಿರ್ಮಾಣಗೊಂಡಿರುವ ಕೈಗಾರಿಕಾ ತರಬೇತಿ ಮತ್ತು ಸೇವಾ ಕೇಂದ್ರದ ಸದ್ಯದ ಸ್ಥಿತಿಯಿದು!.
ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಮೂಲ ಸೌಕರ್ಯ ಕೊರತೆಯಿಂದಾಗಿ ತರಬೇತಿ ಕೇಂದ್ರದ ಬಾಗಿಲು ಮುಚ್ಚಲಾಯಿತು. ತರಬೇತಿ ಕೇಂದ್ರ ಮುಚ್ಚಿದ ಬಳಿಕ ಕಟ್ಟಡ ಹಾಗೂ ಸುತ್ತಲಿನ ಪರಿಸರವನ್ನು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿಯೂ ಮರೆತುಬಿಟ್ಟಿತು. ಸರ್ಕಾರದ ಅನುದಾನ ಬಳಸಿಕೊಂಡು ನಿರ್ಮಿಸಿದ ಕಟ್ಟಡವನ್ನು ಪಾಳು ಬಿಡುವ ಬದಲು ಸರ್ಕಾರದ ಇತರ ಯಾವುದಾದರೂ ಯೋಜನೆಗೆ ಬಳಸಿಕೊಳ್ಳದೆ ನಿರ್ಲಕ್ಷೃ ಮಾಡಿದ ಪರಿಣಾಮ ಲಕ್ಷಾಂತರ ರೂಪಾಯಿ ವೆಚ್ಚದ ಕಟ್ಟಡ ಇಂದು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಭೂತ ಬಂಗಲೆಯಂತಿದೆ: ಕಡೇಶಿವಾಲಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಅಧೀನದಲ್ಲಿ ಕೈಗಾರಿಕಾ ತರಬೇತಿ ಕೇಂದ್ರ ಆರಂಭವಾದಾಗ ಆರಂಭದ ಹಂತದಲ್ಲಿ ಅನೇಕ ಮಂದಿ ಇಲ್ಲಿ ತರಬೇತಿ ಪಡೆದಿದ್ದರು. ಆಗ ಸಿಬ್ಬಂದಿ ಇದ್ದರು.
ಅನುದಾನವೂ ಬರುತ್ತಿತ್ತು. ಕಾಲ ಬದಲಾಗುತ್ತಿದ್ದಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಯಿತು. ಸಿಬ್ಬಂದಿ ನಿವೃತ್ತರಾದ ನಂತರ ಹೊಸ ನೇಮಕಾತಿ ನಡೆಯಲಿಲ್ಲ. ಅನುದಾನ ಬರುವುದು ಸ್ಥಗಿತವಾಯಿತು. ಪರಿಣಾಮವಾಗಿ ತರಬೇತಿ ಕೇಂದ್ರ ಬಂದ್ ಆಯಿತು. ಬಳಿಕ ಕೆಲವೇ ವರ್ಷಗಳಲ್ಲಿ ನಿರ್ವಹಣೆ ಕಾಣದೆ ಪಾಳುಬಿದ್ದು ಭೂತ ಬಂಗಲೆಯಂತಾಗಿದೆ.

ತರಬೇತಿ ನೀಡಲು ಉಪಯುಕ್ತವಾಗಲೆಂದು ವಿವಿಧ ಯಂತ್ರಗಳು ಇಲ್ಲಿದ್ದವು. ಕೇಂದ್ರ ಬಂದ್ ಆದ ಬಳಿಕ ಇವುಗಳಲ್ಲಿ ಬಹುಪಾಲನ್ನು ಇಲಾಖೆ ವಾಪಸ್ ಕೊಂಡೊಯ್ದಿದೆ. ಕಟ್ಟಡಕ್ಕೆ ಬಾಗಿಲೇ ಇಲ್ಲದೆ ಕೆಲವು ನಾಪತ್ತೆಯಾಗಿವೆ. ಸರ್ಕಾರ ಖರ್ಚು ಮಾಡಿ ಆರಂಭಿಸಿದ ಕೇಂದ್ರವೊಂದು ಬಳಕೆ ಹಾಗೂ ನಿರ್ವಹಣೆ ಇಲ್ಲದೆ ಪಾಳುಬಿದ್ದ ಸ್ಥಿತಿಗೆ ಬಂದಿರುವುದು ಇಲಾಖೆಯ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ ಎಂದು ಸ್ಥಳೀಯರು ದೂರುತ್ತಾರೆ.

ವಿಷ ಜಂತುಗಳು ಆವಾಸ ಸ್ಥಾನ

ಸದ್ಯಕ್ಕೆ ಈ ಕಟ್ಟಡದ ಸುತ್ತಲೂ ಪೊದೆಗಳು ತುಂಬಿ ವಿಷಕಾರಿ ಜಂತುಗಳ ಆವಾಸ ಸ್ಥಾನವಾಗಿದೆ. ಇದು ಕೈಗಾರಿಕಾ ತರಬೇತಿ ಕೇಂದ್ರ ಎಂಬುವುದಕ್ಕೆ ಮಸುಕಾಗಿರುವ ಒಂದು ನಾಮಫಲಕ ಮಾತ್ರ ಸಾಕ್ಷಿಯಾಗಿ ಉಳಿದಿದೆ. ಮುಂಭಾಗದ ಶಟರ್ ಅರ್ಧ ತೆರೆದಿದೆ. ಬಾಗಿಲುಗಳೇ ಇಲ್ಲದ ಕಟ್ಟಡದೊಳಗೆ ಹಳೆಯ ಬಟ್ಟೆಗಳು ಕಾಣಸಿಗುತ್ತವೆ. ಮೇಲ್ಛಾವಣಿ ಕುಸಿದಿದ್ದು, ಗೋಡೆಗಳು ಬಣ್ಣ ಬದಲಾಯಿಸಿಕೊಂಡಿವೆ.
ತೆರವಿಗೆ ಪಂಚಾಯಿತಿ ಸೂಚನೆ
ಕಡೇಶಿವಾಲಯ ಪಂಚಾಯಿತಿ ವ್ಯಾಪ್ತಿಯಲ್ಲಿ ಪೊದೆಯ ನಡುವೆ ಅನಾಥವಾಗಿರುವ ಕೈಗಾರಿಕಾ ತರಬೇತಿ ಕೇಂದ್ರದ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಪಂಚಾಯತಿಯಿಂದ ಸಂಬಂಧಪಟ್ಟ ಇಲಾಖೆಗೆ ಈ ಹಿಂದೆಯೇ ತಿಳಿಸಲಾಗಿತ್ತು. ಅದರೆ ಇಲ್ಲಿಯವರೆಗೆ ತೆರವಾಗಿಲ್ಲ.

ಕಡೇಶಿವಾಲಯದಲ್ಲಿದ್ದ ಕೈಗಾರಿಕಾ ತರಬೇತಿ ಕೇಂದ್ರ ಬಂದ್ ಆಗಿ ಹಲವು ವರ್ಷಗಳೇ ಸಂದಿವೆ. ಅಲ್ಲಿ ನಮ್ಮ ಇಲಾಖೆಯ ಭೂಮಿ ಇರುವ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಹಳೆಯ ಕಟ್ಟಡ ತೆರವು ಬಗ್ಗೆ ನಮಗೆ ಯಾವುದೇ ಸೂಚನೆ ಮೇಲಧಿಕಾರಿಗಳಿಂದ ಬಂದಿಲ್ಲ. ಅವರ ಮುಂದಿನ ತೀರ್ಮಾನದಂತೆ ಕ್ರಮ ಕೈಗೊಳ್ಳಲಾಗುವುದು.

— ಮಂಜುನಾಥ್ ಹೆಗ್ಡೆ, ಉಪನಿರ್ದೇಶಕರು, ಕೈಗಾರಿಕಾ ವಿಭಾಗ, ದ.ಕ. ಜಿ.ಪಂ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net