ಕೌಟುಂಬಿಕವಾಗಿ ಬೆಳೆಯುವುದು ಪ್ರತಿ ಮಗುವಿನ ಹಕ್ಕು

ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.
ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.
Published on

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿಕೆ 

* ಮೂವರು ದಂಪತಿಗೆ ದತ್ತು ಮಕ್ಕಳ ಆದೇಶ ಹಸ್ತಾಂತರ

ಉಡುಪಿ: ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿ ಮಗುವಿನ ಹಕ್ಕಾಗಿದೆ. ಅದರಿಂದ ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯ ವಾತಾವರಣ ಲಭಿಸುತ್ತದೆ. ಹೀಗಾಗಿ ಕುಟುಂಬದ ಪ್ರೀತಿ ವಂಚಿತ, ಪಾಲಕರನ್ನು ಕಳೆದುಕೊಂಡ, ಪಾಲನೆ ಪೋಷಣೆ ವಂಚಿತ ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳನ್ನು ಕಾನೂನು ಬದ್ಧವಾಗಿ ದತ್ತು ಪ್ರಕ್ರಿಯೆ ಮೂಲಕ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.
ಉಡುಪಿಯ ತಮ್ಮ ಕಚೇರಿಯಲ್ಲಿ ತಮಿಳುನಾಡು ಮೂಲದ ಇಬ್ಬರು ದಂಪತಿಗೆ ಹಾಗೂ ಹಾಸನ ಮೂಲದ ಓರ್ವ ದಂಪತಿಗೆ ಒಟ್ಟು ಮೂರು ಮಕ್ಕಳಿಗೆ ಸಂಬಂಧಿಸಿ ಅಂತಿಮ ದತ್ತು ಆದೇಶ ಹಸ್ತಾಂತರಿಸಿ ಮಾತನಾಡಿದರು.

ಕಸದಂತೆ ಮಕ್ಕಳನ್ನು ಎಸೆಯಬೇಡಿ

ಮಗು ಬೇಡವಾದಲ್ಲಿ ಕಸದ ತೊಟ್ಟಿಗೆ ಎಸೆಯಬೇಡಿ, ಆಸ್ಪತ್ರೆಯ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಬಿಟ್ಟು ಹೋಗಬೇಡಿ. ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಬಹುದು. ಜಿಲ್ಲೆಯಲ್ಲಿ ಸಂತೆಕಟ್ಟೆಯ ಶ್ರೀ ಕೃಷ್ಣಾನುಗೃಹ ದತ್ತು ಕೇಂದ್ರ, ಉಡುಪಿಯ ಬಿ.ಆರ್​. ಶೆಟ್ಟಿ ಆಸ್ಪತ್ರೆ ಹಾಗೂ ನಿಟ್ಟೂರು ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಮಮತೆಯ ತೊಟ್ಟಿಲು ಇಡಲಾಗಿದೆ. ದತ್ತು ಪ್ರಕ್ರಿಯೆ ಕುರಿತು ಮಾಹಿತಿಗಾಗಿ ವೆಬ್​ಸೈಟ್​ https://missionvatsalya.wcd.gov.in ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿ ದೂ.ಸಂ. 0820-2574964 ಸಂಪರ್ಕಿಸಬಹುದು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನಾ ನಾಯಕ, ರಕ್ಷಣಾಧಿಕಾರಿಗಳಾದ ಮಹೇಶ್​, ಸುರಕ್ಷಾ, ಶ್ರೀ ಕೃಷ್ಣಾನುಗೃಹ ದತ್ತು ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.
"

ಕಾನೂನು ಉಲ್ಲಂಘಿಸಿ ಅಥವಾ ಮಕ್ಕಳ ಮಾರಾಟ ಪ್ರಕರಣಗಳಲ್ಲಿ ಆಸ್ಪತ್ರೆಯ ಸಿಬ್ಬಂದಿ ಶಾಮೀಲಾದರೆ 1 ಲಕ್ಷ ರೂ. ದಂಡ ಹಾಗೂ 7 ವರ್ಷ ಜೈಲು ಶಿಕ್ಷೆಯಿದೆ. ಅಲ್ಲೆ ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಮಕ್ಕಳನ್ನು ಖರೀದಿ ಮಾಡುವವರಿಗೆ 1 ಲಕ್ಷ ರೂ. ದಂಡ ಹಾಗೂ 5 ವರ್ಷ ಜೈಲು ಶಿಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net