ಸಮುದ್ರದಲ್ಲಿ ಆತಂಕ ಸೃಷ್ಟಿಸಿದಾತನ ರಕ್ಷಣೆ

(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)
Published on

ಉಡುಪಿ 

ಪಡುಬಿದ್ರಿಯಲ್ಲಿ ಈಶ್ವರ್​ ಮಲ್ಪೆ ತಂಡ ಕಾರ್ಯಾಚರಣೆ

ಉಡುಪಿ: ಪಡುಬಿದ್ರಿ ಬೀಚ್​ನಲ್ಲಿ ಸಮುದ್ರಕ್ಕಿಳಿದು ಆತಂಕ ಸೃಷ್ಟಿಸಿದ ವ್ಯಕ್ತಿಯೋರ್ವನನ್ನು ಮುಳುಗುತಜ್ಞ ಈಶ್ವರ್​ ಮಲ್ಪೆ ನೇತೃತ್ವದ ತಂಡ ರಕ್ಷಿಸಿದ ಘಟನೆ ನಡೆದಿದೆ. ಪಡುಬಿದ್ರಿಯ ಕಾಡಿಪಟ್ಣದ ಯತೀಶ್​ (38) ರಕ್ಷಿಸಲ್ಪಟ್ಟ ಯುವಕ.
ಪಡುಬಿದ್ರಿಯ ಬ್ಲೂ ಫ್ಲಾಗ್​ ಬೀಚ್​ನಲ್ಲಿ ಲೈಫ್​ ಗಾರ್ಡ್​ ವೃತ್ತಿ ಮಾಡುತ್ತಿದ್ದ ಯತೀಶ್​, ಈ ಹಿಂದೆಯೂ ಇದೇ ರೀತಿ ದುಸ್ಸಾಹಸ ಮಾಡಿದ್ದು, ಸ್ಥಳೀಯರೇ ದಡಕ್ಕೆ ಕರೆತಂದಿದ್ದರು.
ಭಾನುವಾರ (ಆ.16) ಮಧ್ಯಾಹ್ನ ಸಮುದ್ರಕ್ಕಿಳಿದು ಮೂರು ತಾಸಿಗೂ ಅಧಿಕ ಸಮಯ ಈಜಾಡುತ್ತಿದ್ದ ಆತನನ್ನು ಸಮೀಪದಲ್ಲೇ ದೋಣಿಯಲ್ಲಿದ್ದ ಮೀನುಗಾರರು ರಕ್ಷಿಸಲು ಯತ್ನಿಸಿದರೂ ಆತ ದಡಕ್ಕೆ ಮರಳಿರಲಿಲ್ಲ.

ಶಾಸಕರಿಗೆ ಕರೆ

ಯುವಕನ ಹುಟ್ಟಾಟ ಕಂಡ ಸದಾಶಿವ ಪಡುಬಿದ್ರಿ ಎಂಬವರು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಶಾಸಕ ಯಶ್​ಪಾಲ್​ ಕೂಡಲೇ ಈಶ್ವರ್​ ಮಲ್ಪೆ ಅವರನ್ನು ಸಂಪರ್ಕಿಸಿ ಯುವಕನನ್ನು ರಕ್ಷಿಸುವಂತೆ ಮನವಿ ಮಾಡಿದ್ದರು. 
ಮಧ್ಯಾಹ್ನ 2:15ರ ಸುಮಾರಿಗೆ ಪಡುಬಿದ್ರಿ ಕಡಲ ಕಿನಾರೆಗೆ ಬಂದ ಈಶ್ವರ್​ ಮಲ್ಪೆ ಸಮುದ್ರಕ್ಕಿಳಿದು ಯತೀಶ್​ನ ಸಮೀಪ ತೆರಳಿದರು. ಆತನ ಮನವೊಲಿಸಿ ಈಜುತ್ತಲೇ 3:15ರ ವೇಳೆಗೆ ದಡಕ್ಕೆ ಕರೆ ತರುವಲ್ಲಿ ಯಶಸ್ವಿಯಾದರು. 
ಈಶ್ವರ್​ ಅವರೊಂದಿಗೆ ಸ್ಥಳೀಯ ಈಜುಪಟುಗಳು, ಬ್ಲೂ ಫ್ಲಾಗ್​ ಬೀಚ್​ನ ಲೈಫ್​ಗಾರ್ಡ್​ಗಳಾದ ಪ್ರಜ್ವಲ್​, ಸುಶಾಂತ್​, ಬಾದಲ್​ ಸಹಕರಿಸಿದ್ದರು. ಕರಾವಳಿ ಕಾವಲು ಪಡೆ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net