

ಸೌಕೂರು ಏತನೀರಾವರಿ ಯೋಜನೆಯ ನೀರು ನಂಬಿ 5 ಗ್ರಾಪಂ ವ್ಯಾಪ್ತಿಯ 8 ಗ್ರಾಮದ ಕೃಷಿಕರು ಬೇಸಾಯ ಮಾಡುತ್ತಿದ್ದು ಸುಗ್ಗಿ ಬೇಸಾಯಕ್ಕೆ ರೈತರಿಗೆ ನವೆಂಬರ್ ತಿಂಗಳಿನಲ್ಲಿ ನೀರು ಹರಿಸಬೇಕಿತ್ತು. ವಿದ್ಯುತ್ ಬಿಲ್ ಪಾವತಿಸದ ಕಾರಣ ನೀರು ಬಿಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಸಂಬಂದಪಟ್ಟವರು ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು.
ಈ ನೀರಾವರಿ ಯೋಜನೆ ನಂಬಿ ಕೃಷಿ ಮಾಡಲು ತಯಾರಿ ಮಾಡಿಕೊಂಡಿದ್ದೆವು. ಇಲಾಖಾಧಿಕಾರಿಗಳು ಯಾವುದೇ ಮುನ್ಸೂಚನೆ, ಮಾಹಿತಿ ನೀಡದೆ ಏಕಾಏಕಿ ನೀರು ಬಿಡುವುದು ನಿಲ್ಲಿಸಿದ್ದಾರೆ. ಸುಗ್ಗಿ ಕೃಷಿ ಮಾಡುವ ಹುಮ್ಮಸ್ಸಿನಿಂದ ಗದ್ದೆಗಳಿಗೆ ಗೊಬ್ಬರ ಹಾಕಿ, ಬಿತ್ತನೆ ಮಾಡಲು ಹೊರಟಿದ್ದೆವು. ಈಗ ನೀರಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.
ಕಳೆದ ಒಂದೂವರೆ ವರ್ಷದಿಂದ ಮೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಯಾಗದ ಕಾರಣ ಮಳೆಗಾದಲ್ಲಿ ಕಡಿತಗೊಳಿಸಿದ ವಿದ್ಯುತ್ ಸಂಪರ್ಕ ವಾಪಸ್ ನೀಡಿಲ್ಲ. ಕಳೆದ ವರ್ಷವೂ ವಿದ್ಯುತ್ ಕಡಿತ ಮಾಡಿದ್ದರು. ಒಂದಷ್ಟು ಮೊತ್ತ ಪಾವತಿಸಿದ ಬಳಿಕ ಸಂಪರ್ಕ ನೀಡಿದ್ದರು. ಇದು ಸುಗ್ಗಿ ಕೃಷಿಗಾಗಿ ಉಳುಮೆ, ಬೀಜ ಬಿತ್ತನೆ ಸಮಯವಾಗಿದ್ದು ರೈತರಿಗೆ ನೀರು ಬೇಕೆಂದು ಸಂಬಂದಪಟ್ಟವರಿಗೆ ಮನವಿ ಮಾಡಿದ್ದೇವೆ. ಮೆಸ್ಕಾಂ ಈ ಸಮಯದಲ್ಲಿ ಸ್ಪಂದಿಸಿದರೆ ರೈತರಿಗೆ ಅನುಕೂಲವಾಗಲಿದೆ.