

ಉಡುಪಿ: ನಕಲಿ ಹೂಡಿಕೆ ಯೋಜನೆ, ಸಾಲದ ಆಮಿಷ, ನಕಲಿ ಉದ್ಯೋಗ ವೆಬ್ಸೈಟ್ ಹಾಗೂ ಡಿಜಿಟಲ್ ಅರೆಸ್ಟ್ನಂತಹ ಬೆದರಿಕೆಗಳ ಮೂಲಕ ಸೈಬರ್ ಅಪರಾಧಿಗಳು ಜನರನ್ನು ವಂಚಿಸುತ್ತಿದ್ದಾರೆ. ವೈವಾಹಿಕ ಸಂಬಂಧದ ನೆಪದಲ್ಲೂ ಇತ್ತೀಚೆಗೆ ವಂಚನೆ ಪ್ರಕರಣ ಹೆಚ್ಚತೊಡಗಿದೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಉಡುಪಿ ಸೈಬರ್ ಅಪರಾಧ ನಿಯಂತ್ರಣ ಪೊಲೀಸ್ ಠಾಣೆಯ ಸಿಬ್ಬಂದಿ ಪವನಕುಮಾರ ಎಂ. ಸಲಹೆ ನೀಡಿದರು.
ಉಡುಪಿಯ ಅಜ್ಜರಕಾಡಿನ ಡಾ. ಜಿ. ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್ಎಸ್ಎಸ್ ಘಟಕ ಬುಧವಾರ (ಅ.14) ಆಯೋಜಿಸಿದ್ದ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಯ ಹುಟ್ಟಿಸಿ ಹಣ ವಸೂಲಿ
ಆನ್ಲೈನ್ ವಂಚಕರು ಜನರ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ವಿವರ ಪಡೆದು ಹಣ ಲಪಟಾಯಿಸುತ್ತಾರೆ. ಅನಧಿಕೃತ ವೆಬ್ಸೈಟ್ಗಳಲ್ಲಿ ರೆಸ್ಯೂಮ್ ಅಪ್ಲೋಡ್ ಮಾಡುವುದು ಹಾಗೂ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು. ಪೊಲೀಸ್ ಅಧಿಕಾರಿಗಳು ಹಾಗೂ ಇತರ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸಿ ದೂರವಾಣಿ ಕರೆ ಮತ್ತು ವಿಡಿಯೊ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಿ ನಕಲಿ ಪ್ರಕರಣದ ಬೆದರಿಕೆ ಹಾಕಿ ಹಣ ವರ್ಗಾಯಿಸುವಂತೆ ಒತ್ತಾಯಿಸುತ್ತಾರೆ ಎಂದರು.
ಕೂಡಲೇ ದೂರು ದಾಖಲಿಸಿ
ಸೆಕ್ಸ್ಟಾರ್ಷನ್, ಸ್ನ್ಯಾಪ್ಚಾಟ್ನ ದುರ್ಬಳಕೆ ವಿಡಿಯೋ ಮೂಲಕ ಬ್ಲ್ಯಾಕ್ಮೇಲ್ ದಂಧೆ ಹೆಚ್ಚುತ್ತಿದ್ದು ಜಾಗೃತಿ ಅಗತ್ಯ. ಅಪರಿಚಿತ ಸಂಪರ್ಕಗಳ ಬಗ್ಗೆ ದೂರು ಸಲ್ಲಿಸಲು ದೂರಸಂಪರ್ಕ ಇಲಾಖೆಯ ಸಂಚಾರ್ ಸಾಥಿ ಪೋರ್ಟಲ್ನ Know Your Mobile Connections ಸೌಲಭ್ಯ ಬಳಸಿಕೊಳ್ಳಿ. ಸೈಬರ್ ಹಣಕಾಸು ವಂಚನೆಗೆ ಒಳಗಾದರೆ ತಕ್ಷಣವೇ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಕರೆ ಮಾಡಿ, ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ನಲ್ಲಿ ದೂರು ದಾಖಲಿಸಬೇಕು ಎಂದರು.
ಪೊಲೀಸ್ ಮಹಿಳಾ ಸಿಬ್ಬಂದಿ ಜಯಲಕ್ಷ್ಮೀ ಮಾತನಾಡಿ, ಮೊಬೈಲ್ ಬಳಕೆ ಹಾಗೂ ಡಿಜಿಟಲ್ ಗೌಪ್ಯತೆ ಕಾಪಾಡಿಕೊಳ್ಳುವುದು ಅಗತ್ಯ ಎಂದರು. ಕಾಲೇಜ್ನ ಪ್ರಾಂಶುಪಾಲೆ ಪ್ರೊ. ಡಾ.ನಿಕೇತನಾ ಅಧ್ಯಕ್ಷತೆ ವಹಿಸಿದ್ದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ರಾಕೇಶ್ ಮತ್ತು ಡಾ. ಸಫಿಯಾ, ಉಪನ್ಯಾಸಕರಾದ ಆಶಾ, ಸೋನಿಯಾ ನೊರೊನ್ಹಾ, ಸ್ಮಿತಾ ಹಾಗೂ ಶಶಿಕಲಾ ಉಪಸ್ಥಿತರಿದ್ದರು. ಎಂಕಾಂ ವಿದ್ಯಾರ್ಥಿನಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಚಿತ್ರಾ ಸ್ವಾಗತಿಸಿದರು. ಅಭಿಲಾಷಾ ವಂದಿಸಿದರು.