ಹೆಬ್ರಿ: ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ ವೈಜ್ಞಾನಿಕ ಸಂಶೋಧನೆ ಹಾಗೂ ನವೀನ ಆವಿಷ್ಕಾರಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ ಹೇಳಿದರು.
ಹೆಬ್ರಿ ಎಸ್.ಆರ್. ಪಿ.ಯು. ಕಾಲೇಜಿನಲ್ಲಿ ಭೌತಶಾಸ್ತ್ರ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ಸಂಶೋಧನಾ ಮನೋಭಾವ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಉತ್ತೇಜಿಸುವ ಉದ್ದೇಶದಿಂದ ವೇವ್ ಪರ್ಟಿಕಲ್ ಸೊಸೈಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಕ್ರವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಸಂತೆಕಟ್ಟೆ ಪ್ರೌಢಶಾಲೆಯ ಸಹಾಯಕ ವಿಜ್ಞಾನ ಶಿಕ್ಷಕ ಮನೋಹರ್ ಕಾರ್ಯಕ್ರಮ ಉದ್ಘಾಟಿಸಿದರು. ಸಹಾಯಕ ಶಿಕ್ಷಕ ಮಂಜುನಾಥ ಹೆಬ್ಬಾರ್ ಮಾತನಾಡಿದರು. ವಿದ್ಯಾರ್ಥಿ ಅಕ್ಷಯ್ ಭಟ್ ಕ್ವಾಂಟಮ್ ಫಿಸಿಕ್ಸ್ ವಿಷಯದ ಕುರಿತು ಪ್ರಾತ್ಯಕ್ಷಿಕೆ ಹಾಗೂ ವಿಚಾರ ಮಂಡಿಸಿದರು. ಪ್ರಾಂಶುಪಾಲ ಪ್ರಶಾಂತ ಎಚ್. ಉಪಸ್ಥಿತರಿದ್ದರು. ಭೌತಶಾಸ್ತ್ರ ವಿಭಾಗದ ಪ್ರಶಾಂತ ಎಂ. ಮತ್ತು ಗೀತಾ ಪ್ರಭು ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿನಿ ಐಶ್ವರ್ಯಾ ಶೆಟ್ಟಿ ನಿರೂಪಿಸಿದರು. ದೀಪ್ತಿ ಆಚಾರ್ಯ ವಂದಿಸಿದರು.
ವಿದ್ಯಾರ್ಥಿಗಳಲ್ಲಿ ಭೌತಶಾಸ್ತ್ರದ ಅಧ್ಯಯನದಲ್ಲಿ ಕುತೂಹಲ, ಪ್ರಯೋಗಶೀಲತೆ ಹಾಗೂ ತಾರ್ಕಿಕ ಚಿಂತನೆಯ ಮಹತ್ವ, ಛಲ ಇರಬೇಕು. ತಮಗಾಗಿ ಅಧ್ಯಯನ ಮಾಡಬೇಕೇ ಹೊರತು ಇತರರಿಗಾಗಿ ಅಲ್ಲ. ವಿಜ್ಞಾನವನ್ನು ಮನಪೂರ್ವಕವಾಗಿ ಸ್ವೀಕರಿಸಿ ಅಧ್ಯಯನ ಮಾಡಿದರೆ ಯಶಸ್ಸು ಸಾಧ್ಯ.
— ಮನೋಹರ್ ಸರ್ಕಾರಿ ಸಂತೆಕಟ್ಟೆ ಪ್ರೌಢಶಾಲೆ ಸಹಾಯಕ ವಿಜ್ಞಾನ ಶಿಕ್ಷಕ