ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ದಿನಕರ ಅದೇಲು ಮಾತನಾಡಿದರು. ಪ್ರಮುಖರಾದ ಯೋಗೇಶ ಆರ್ಕಾಟಿ, ರಾಘವೇಂದ್ರ ಗಾಣಿಗ ಉಪಸ್ಥಿತರಿದ್ದರು.
ಕುಂದಾಪುರ: ಸಮರ್ಪಣಾ ಮತ್ತು ನಿಸ್ವಾರ್ಥ ಮನೋಭಾವದಿಂದ ದೇಶದ ಸ್ವಾತಂತ್ರೃಕ್ಕಾಗಿ ಬಲಿದಾನಗೈದ ಮಹಾಪುರುಷರನ್ನು ಸ್ಮರಣೆ ಮಾಡಬೇಕು. ದಾರಿ ತಪ್ಪಿದ ಯುವಕರು, ಜನತೆ ಹಾಗೂ ಜೆನ್ ಜೀಗಳಲ್ಲಿ ದೇಶಭಕ್ತಿ ಉದ್ದೀಪನಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ದಿನಕರ ಅದೇಲು ಹೇಳಿದರು.
ಗಂಗೊಳ್ಳಿ ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ಗಂಗೊಳ್ಳಿ ಶ್ರೀ ರಾಮ ಮಂದಿರದಲ್ಲಿ ಆಯೋಜಿಸಲಾದ ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆಯಲ್ಲಿ ಶುಕ್ರವಾರ ಮಾತನಾಡಿದರು.
ಗಂಗೊಳ್ಳಿ ಮಲ್ಯರಬೆಟ್ಟು ಶ್ರೀ ಗ್ರಾಮ ಜಟ್ಟಿಗ ಸೇವಾ ಸಮಿತಿ ಅಧ್ಯಕ್ಷ ಯೋಗೇಶ ಆರ್ಕಾಟಿ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಜಾಗರಣ ವೇದಿಕೆಯ ರಾಘವೇಂದ್ರ ಗಾಣಿಗ ಉಪಸ್ಥಿತರಿದ್ದರು. ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನ ಬಳಿ ದೇವಳ ಮೊಕ್ತೇಸರ ಎನ್.ಸದಾಶಿವ ನಾಯಕ್ ಪಂಜಿನ ಮೆರವಣಿಗೆ ಉದ್ಘಾಟಿಸಿದರು. ದೇವಸ್ಥಾನದ ಬಳಿಯಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ಮುಖ್ಯ ರಸ್ತೆ ಮೂಲಕ ಮೇಲ್‌ಗಂಗೊಳ್ಳಿ ಶ್ರೀರಾಮ ಮಂದಿರದ ತನಕ ಸಾಗಿ ಸಮಾಪನಗೊಂಡಿತು.
ಹಿಂದೂ ಜಾಗರಣ ವೇದಿಕೆಯ ಯಶವಂತ ಖಾರ್ವಿ ಸ್ವಾಗತಿಸಿದರು. ಕಾರ್ತಿಕ್ ಖಾರ್ವಿ ಪ್ರತಿಜ್ಞಾವಿಧಿ ಬೋಧಿಸಿದರು. ಕುಂದಾಪುರ ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಪವನ್ ನಾಯಕ್ ಮತ್ತು ವಿವಿಧ ಠಾಣೆ ಉಪನಿರೀಕ್ಷಕರ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.