ಹಳೇಗೇಟು ರಸ್ತೆ ಕಾಮಗಾರಿ ಪರಿಶೀಲನೆ

ಶಾಸಕ ಅಶೋಕ್ ಕುಮಾರ್ ರೈ ಕಾಮಗಾರಿ ಪರಿಶೀಲನೆ ನಡೆಸಿದರು. ಇಂಜಿನಿಯರ್ ರಾಜು, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೌಸೀಫ್ ಯು.ಟಿ. ಮೊದಲಾದವರಿದ್ದರು.
ಶಾಸಕ ಅಶೋಕ್ ಕುಮಾರ್ ರೈ ಕಾಮಗಾರಿ ಪರಿಶೀಲನೆ ನಡೆಸಿದರು. ಇಂಜಿನಿಯರ್ ರಾಜು, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೌಸೀಫ್ ಯು.ಟಿ. ಮೊದಲಾದವರಿದ್ದರು.
Published on

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಿಂದ ಕವಲೊಡೆಯುವ ಹಳೆಗೇಟು-ಮರ್ಧಾಳ ರಾಜ್ಯ ಹೆದ್ದಾರಿಗೆ ಹಳೆಗೇಟು ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸುತ್ತಿರುವ ಕಾಂಕ್ರೀಟ್ ಕಾಮಗಾರಿಯನ್ನು ಶಾಸಕ ಅಶೋಕ್ ಕುಮಾರ್ ರೈ ಪರಿಶೀಲಿಸಿದರು.

ಈಗಾಗಲೇ ಇಲ್ಲಿ ಕಾಂಕ್ರೀಟ್ ಕೆಲಸ ಆರಂಭಿಸಲಾಗಿದ್ದು, ಅಲ್ಲಿರುವ ತೋಡಿಗೆ ಕಟ್ಟಿರುವ ಮೋರಿ ಹಾಗೂ ತಡೆಗೋಡೆ ಕುಸಿಯುವ ಹಂತದಲ್ಲಿದ್ದರೂ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು ಅದನ್ನು ಸರಿಪಡಿಸದೆ ಅದರ ಮೇಲೆಯೇ ಕಾಂಕ್ರೀಟ್ ಕಾಮಗಾರಿ ನಡೆಸಲು ಸಿದ್ಧತೆ ನಡೆಸಿದ್ದರು. ಈ ಬಗ್ಗೆ ಸಾರ್ವಜನಿಕರು ಶಾಸಕರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳಕ್ಕಾಗಮಿಸಿದ ಶಾಸಕ ಅಶೋಕ್ ಕುಮಾರ್ ರೈ, ದೂರವಾಣಿ ಮೂಲಕ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರನ್ನು ಸಂಪರ್ಕಿಸಿ ಮೋರಿ ಹಾಗೂ ತಡೆಗೋಡೆ ನಿರ್ಮಿಸಿದ ಬಳಿಕವೇ ಕಾಂಕ್ರೀಟ್ ಕಾಮಗಾರಿ ನಡೆಸುವಂತೆ ಸೂಚಿಸಿದರು.
ಚತುಷ್ಪಥ ಹೆದ್ದಾರಿ ಕಾಮಗಾರಿ ಸಂಸ್ಥೆಯ ಇಂಜಿನಿಯರ್ ರಾಜು, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೌಸೀಫ್ ಯು.ಟಿ., ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಗ್ರಾಪಂ ಮಾಜಿ ಸದಸ್ಯ ಅಬ್ದುಲ್ ರಶೀದ್ ಮತ್ತಿತರರು ಉಪಸ್ಥಿತರಿದ್ದರು.

ಚತುಷ್ಪಥ ರಸ್ತೆಗೆ ಸಂಪರ್ಕಿಸುವಂತೆ ಯೋಜನೆ

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಉಪ್ಪಿನಂಗಡಿ ಅಂಡರ್‌ಪಾಸ್‌ನಿಂದ ಉಪ್ಪಿನಂಗಡಿ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಚತುಷ್ಪಥ ರಸ್ತೆಗೆ ಬೇಕಾಗುವ ಜಾಗ ಮೀಸಲಿಡಲು ತಿಳಿಸಿದ್ದೇನೆ. ಇಲ್ಲದಿದ್ದರೆ ಚತುಷ್ಪಥ ರಸ್ತೆಯನ್ನು ಆ ರಸ್ತೆಗೆ ಸಂಪರ್ಕಿಸಲು ಕಷ್ಟವಾಗಬಹುದು. ಆದ್ದರಿಂದ ಮುಂದೆ ನಿರ್ಮಾಣವಾಗಲಿರುವ ಚತುಷ್ಪಥ ರಸ್ತೆಯನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸುವಂತೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net