ಗಾಯಗೊಂಡ ವಿದ್ಯಾರ್ಥಿಗಳಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ದುರ್ಘಟನೆ
ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ದುರ್ಘಟನೆ
Published on
ಬಂಟ್ವಾಳ: ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಬಸ್ಸಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಗಾಯಗೊಂಡ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು, ಪೆರಾಜೆ ಗ್ರಾಮದ ಸಾದಿಕುಕ್ಕಿ ನಿವಾಸಿ ಗಣೇಶ ಗೌಡರ ಪುತ್ರಿ ಅನ್ಬಿ ಹಾಗೂ ಪೆರ್ನೆ ನಿವಾಸಿ ಕ್ಷಿತಿ ರೈ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಶಾಲಾ ಬಸ್ಸು ಬುಧವಾರ ಸಂಜೆ ಶಾಲಾ ಮಕ್ಕಳನ್ನು ಕರೆದುಕೊಂಡು ಕಲ್ಲಡ್ಕದಿಂದ ಮಾಣಿ, ಅಲ್ಲಿಂದ ಬರಣಿಕೆರೆ, ಬರಿಮಾರು, ಕಲ್ಲೆಟ್ಟಿ ಮಾರ್ಗವಾಗಿ ಬುಡೋಳಿ ಮೂಲಕ ಪೆರ್ನೆಗೆ ತೆರಳುತ್ತಿತ್ತು.ಈ ವೇಳೆ ಕಲ್ಲೆಟ್ಟಿಯಲ್ಲಿ ಕೆಲವು ಮಕ್ಕಳನ್ನು ಇಳಿಸಿ ಹಿಂತಿರುಗಿ ಬಸ್ಸು ಬರಿಮಾರು ಕಲ್ಲೆಟ್ಟಿ ದೈವಸ್ಥಾನದ ಸಮೀಪ ತಲುಪುತ್ತಿದ್ದಂತೆ ರಸ್ತೆ ಬದಿಯಲ್ಲಿದ್ದ ನೂರಾರು ವರ್ಷ ಹಳೆಯದಾದ ಬೃಹತ್ ಮರ ಏಕಾಏಕಿ ಬುಡ ಸಮೇತ ಉರುಳಿ ಬಸ್ಸಿನ ಮೇಲೆ ಅಡ್ಡವಾಗಿ ಬಿದ್ದಿತ್ತು. ಘಟನೆ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಕೂಡಲೇ ಸ್ಥಳಕ್ಕಾಗಮಿಸಿ ಬಸ್ಸಿನಲ್ಲಿದ್ದ ಮಕ್ಕಳನ್ನು ಹೊರತೆಗೆದು ಆಸ್ಪತ್ರೆಗಳಿಗೆ ರವಾನಿಸಿದ್ದಾರು. ಈ ದುರ್ಘಟನೆಯಲ್ಲಿ ಪೆರ್ನೆ ಗ್ರಾಮದ ಕಡಂಬು ನೆಕ್ಕರೆ ನಿವಾಸಿ ಅನಿತಾ-ಚಂದ್ರಶೇಖರ್ ನಾಯ್ಕ ದಂಪತಿಯ ಏಕೈಕ ಪುತ್ರಿ, ಯುಕೆಜಿ ವಿದ್ಯಾರ್ಥಿನಿ ಚಿರನ್ವಿ ಮೃತಪಟ್ಟಿದ್ದಳು.
ಗಂಭೀರ ಗಾಯಗೊಂಡಿದ್ದ ಅನ್ವಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಪ್ರಸ್ತುತ ಪ್ರಾಣಾಪಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದಾಳೆ. ಕ್ಷಿತಿ ರೈಯನ್ನು ಆರಂಭದಲ್ಲಿ ಕಲ್ಲಡ್ಕದ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಚಿಕಿತ್ಸೆ ಮುಂದುವರಿದಿರುವುದಾಗಿ ತಿಳಿದು ಬಂದಿದೆ.

ಅಂತ್ಯಕ್ರಿಯೆ

ಈ ಆಕಸ್ಮಿಕ ಘಟನೆಯಲ್ಲಿ ಮೃತಪಟ್ಟ ಚಿರನ್ವಿಯ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವನ್ನು ಪೆರ್ನೆ ಗ್ರಾಮದ ಕಡಂಬು ನೆಕ್ಕರೆ ಮನೆ ಸಮೀಪವೇ ಮಾಡಿರುವುದಾಗಿ ತಿಳಿದು ಬಂದಿದೆ. ಶ್ರೀ ರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸಭೆ ಗುರುವಾರ ನಡೆದಿದ್ದು ಮೃತ ಚಿರನ್ವಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net