ಕಾಲೇಜು ಬಸ್ಸಿನ ಓವರ್‌ಟೇಕ್ ಭರಾಟೆಗೆ ಇನ್ಫೋಸಿಸ್ ಉದ್ಯೋಗಿ ಬಲಿ

ಮೃತ ಪ್ರಜ್ವಲ್
ಮೃತ ಪ್ರಜ್ವಲ್
Published on
ಉಳ್ಳಾಲ: ಕೊಣಾಜೆಯಿಂದ ಮಂಗಳೂರು ಕಡೆಗೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಪಿ.ಎ.ಕಾಲೇಜಿನ ಬಸ್ ನಾಟೆಕಲ್ ತಿರುವಿನಲ್ಲಿ ದ್ವಿಚಕ್ರ ವಾಹನವನ್ನು ಓವರ್‌ಟೇಕ್ ಮಾಡಲು ಮುಂದಾದ ಪರಿಣಾಮ ಚರಂಡಿಗೆ ವಾಲಿದ್ದು, ಈ ಅಪಘಾತದಲ್ಲಿ ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟರೆ, ಸಹಸವಾರೆ ಸಹಿತ ಬಸ್ಸಿನಲ್ಲಿದ್ದ 15ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಚಿಕ್ಕಮಗಳೂರು ಕುವೆಂಪು ನಗರ ನಿವಾಸಿ ಇನ್ಫೋಸಿಸ್ ಉದ್ಯೋಗಿ ಪ್ರಜ್ವಲ್ ಅರ್ನಾಲ್ಡ್ (30) ಮೃತ ದುರ್ದೈವಿ. ಸ್ಕೂಟರ್‌ನಲ್ಲಿದ್ದ ಸಹೋದ್ಯೋಗಿ ಶಿವಮೊಗ್ಗ ಸಾಗರ ಮೂಲದ ಅಕ್ಷತಾ ಗಾಯಗೊಂಡಿದ್ದಾರೆ. ಇಬ್ಬರೂ ಶನಿವಾರ ಸಂಜೆ ಕೆಲಸ ಮುಗಿಸಿ ಮಂಗಳೂರಿನತ್ತ ಸಂಚರಿಸುತ್ತಿದ್ದರು. ನಾಟೆಕಲ್ ತಿರುವು ತಲುಪಿದಾಗ ಹಿಂದಿನಿಂದ ಬಂದ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್ ಸ್ಕೂಟರನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಚರಂಡಿಗೆ ವಾಲಿದೆ. ಅಪಘಾತದಲ್ಲಿ ಬಸ್‌ನಲ್ಲಿದ್ದ 15ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಕೂಟರ್ ಅಡಿಯಲ್ಲಿದ್ದರೂ ಅರಿವಿಲ್ಲ

ಘಟನೆ ನಡೆದ ಸಂದರ್ಭ ಸ್ಕೂಟರ್ ಸವಾರರ ಸಹಿತ ಬಸ್‌ನಡಿ ಸಿಲುಕಿಕೊಂಡಿತ್ತು. ಆದರೆ ಬಸ್ಸಿನಲ್ಲಿದ್ದ ಯಾರ ಗಮನಕ್ಕೂ ಬಂದಿರಲಿಲ್ಲ. ಸಾರ್ವಜನಿಕರು ತುರ್ತು ಬಾಗಿಲಿನ ಮೂಲಕ ವಿದ್ಯಾರ್ಥಿಗಳನ್ನು ಹೊರತೆಗೆದ ಬಳಿಕ ಅಡಿಭಾಗದಲ್ಲಿ ಸ್ಕೂಟರ್ ಸವಾರ ಸಿಲುಕಿದ್ದನ್ನು ನೋಡಿ ಬಳಿಕ ಕ್ರೇನ್ ತರಿಸಿ ಬಸ್‌ನ್ನು ಮೇಲಕ್ಕೆತ್ತಿ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಪ್ರಜ್ವಲ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸ್ಕೂಟರ್ ಸಂಪೂರ್ಣ ಅಪ್ಪಚ್ಚಿಯಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಕೆಲಹೊತ್ತು ರಸ್ತೆ ಬಂದ್ ಆಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಈ ಕಾಲೇಜಿನ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿದ್ದರೂ ಪ್ರತಿದಿನ ಮಿತಿಮೀರಿದ ವೇಗದಿಂದಲೇ ಸಂಚರಿಸುತ್ತದೆ. ಈ ಘಟನೆಗೆ ಅಜಾಗರೂಕತೆಯ ಚಾಲನೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಕಾರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net