ಪ್ಲಾಸ್ಟಿಕ್​ಯುಕ್ತ ಸ್ಯಾನಿಟರಿ ಪ್ಯಾಡ್​ ಆರೋಗ್ಯಕ್ಕೆ ಮಾರಕ

ಉಡುಪಿಯ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರಿಗೆ ಡಾ. ವಿದ್ಯಾ ಪ್ರತಾಪ್​ ಆರೋಗ್ಯ ಮಾಹಿತಿ ನೀಡಿದರು. ಡಾ.ಅರುಣಿಮಾ ಕೆ.ವಿ. ಇದ್ದರು.
ಉಡುಪಿಯ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರಿಗೆ ಡಾ. ವಿದ್ಯಾ ಪ್ರತಾಪ್​ ಆರೋಗ್ಯ ಮಾಹಿತಿ ನೀಡಿದರು. ಡಾ.ಅರುಣಿಮಾ ಕೆ.ವಿ. ಇದ್ದರು.
Published on

* ಉಡುಪಿಯಲ್ಲಿ ಡಾ. ವಿದ್ಯಾ ಪ್ರತಾಪ್​ ಮಾಹಿತಿ

* ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಜಾಗೃತಿ 

ಉಡುಪಿ: ಯುವತಿ ಮತ್ತು ಮಹಿಳೆಯರು ಋತುಚಕ್ರದ ಸಂದರ್ಭದಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್​ಗಳು ಪ್ಲಾಸ್ಟಿಕ್​ ಮತ್ತು ರಾಸಾಯನಿಕಯುಕ್ತ ಪದಾರ್ಥ ಹೊಂದಿರುತ್ತವೆ. ಅವುಗಳ ಬಳಕೆ ಆರೋಗ್ಯಕ್ಕೆ ಮಾರಕ. ಅಲ್ಲದೆ, ಇಂತಹ ಪ್ಯಾಡ್​ಗಳ ತ್ಯಾಜ್ಯ ವಿಲೇವಾರಿ ಕಾರ್ಯವೂ ಸಹ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗುತ್ತಿದೆ. ಹೀಗಾಗಿ ಎಲ್ಲ ವಿದ್ಯಾರ್ಥಿನಿಯರೂ ಆರೋಗ್ಯಕ್ಕೆ ತೊಡಕಾದ ಕಾಟನ್​ ಪ್ಯಾಡ್​ಗಳನ್ನೇ ಬಳಸಬೇಕು ಎಂದು ಮಣಿಪಾಲದ ಟಿ.ಎ. ಪೈ ಮೆನೇಜ್ಮೆಂಟ್​ ಇನ್​ಸ್ಟಿಟ್ಯೂಟ್​ನ ಪ್ರಾಧ್ಯಾಪಕಿ ಡಾ. ವಿದ್ಯಾ ಪ್ರತಾಪ್​ ತಿಳಿಸಿದರು.
ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಮತ್ತು ಸ್ವಚ್ಛತಾ ವಿಭಾಗವು ಸೀತಾಲಕ್ಷ್ಮೀ ಮತ್ತು ಬಿ.ಎಂ. ರಾಮಕೃಷ್ಣ ಹತ್ವಾರ್​ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ಲಾಸ್ಟಿಕ್​ ತ್ಯಾಜ್ಯ
ಈ ಕಾಲೇಜಿನಲ್ಲಿ 586 ವಿದ್ಯಾರ್ಥಿನಿಯರು ಇದ್ದಾರೆ. ಖುತುಚಕ್ರ ಸಮಯದಲ್ಲಿ ಪ್ರತಿ ತಿಂಗಳಿಗೆ 12 ಸ್ಯಾನಿಟರಿ ಪ್ಯಾಡ್​ ಬಳಸಿದರೂ ವರ್ಷಕ್ಕೆ 84,384 ಪ್ಯಾಡ್​ಗಳು ಪ್ಲಾಸ್ಟಿಕ್​ ತ್ಯಾಜ್ಯವಾಗಿ ಪರಿಸರ ಸೇರುವಂತಾಗುತ್ತದೆ. ಇದೊಂದು ಗಂಭೀರವಾದ ತ್ಯಾಜ್ಯ ನಿರ್ವಹಣೆಯ ಸಮಸ್ಯೆಯಾಗುತ್ತಿದೆ ಎಂದು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿಕೊಟ್ಟರು.
ಡಾ.ಅರುಣಿಮಾ ಕೆ.ವಿ. ಮಾತನಾಡಿ, ಸ್ಯಾನಿಟರಿ ಪ್ಯಾಡ್​ ಬಳಕೆಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ಮತ್ತು ಆರೋಗ್ಯದ ಮೇಲಿನ ದುಷ್ಪರಿಣಾಮ ತಿಳಿಸಿದರು. ಅಲ್ಲದೆ, ಗರ್ಭಕೋಶ ಮತ್ತು ಅದರ ಸ್ವಚ್ಛತೆಯ ಕುರಿತಂತೆ ವಿವರವಾದ ಮಾಹಿತಿ ನೀಡಿದರು.
ಕೊಯಮತ್ತೂರಿನ ಜೆನಿಸಿಸ್​ ಪೆ. ಪ್ಯಾಕೇಜಿಂಗ್​ ಲಿ. ಕಂಪನಿಯ ಪ್ರಾಯೋಜಕತ್ವದಲ್ಲಿ ಕಾಲೇಜಿನ ಎಲ್ಲ ವಿದ್ಯಾರ್ಥಿನಿಯರಿಗೂ ಹತ್ತಿಬಟ್ಟೆಯಿಂದ ತಯಾರಿಸಿದ ಪರಿಸರ ಸ್ನೇಹಿ ಪ್ಯಾಡ್​ಗಳನ್ನು ಉಚಿತವಾಗಿ ವಿತರಿಸಲಾಯತು.
ಉಪನ್ಯಾಸಕಿ ಗಿರಿಜಾ ಹೆಗಡೆ ಸ್ವಾಗತಿಸಿದರು. ಕಾಲೇಜಿನ ಆರೋಗ್ಯ ಮತ್ತು ಸ್ವಚ್ಛತಾ ವಿದ್ಯಾರ್ಥಿ ಪ್ರತಿನಿಧಿಗಳಾದ ಸತ್ಯಾ, ಶಾಶ್ವತಿ, ಗ್ರೀಷ್ಮಾ, ಎನ್​ಎಸ್​ಎಸ್​ನ ಪ್ರತಿಭಾ ಪಾಲ್ಗೊಂಡಿದ್ದರು.
"

ತ್ಯಾಜ್ಯ ನಿರ್ವಹಣೆಯ ಕುರಿತು ಡಾಕ್ಟರೇಟ್​ ಪದವಿ ಗಳಿಸಿರುವ ಡಾ. ವಿದ್ಯಾ ಪ್ರತಾಪ್​ ಅವರು ಈ ರೀತಿಯ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಕಾಲೇಜು ವಿದ್ಯಾರ್ಥಿನಿಯರಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸಬೇಕು.

— ಜಗದೀಶ್​ ಕುಮಾರ್​. ಕಾಲೇಜಿನ ಪ್ರಾಂಶುಪಾಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net