

ಉಡುಪಿ: ವಿದ್ಯಾರ್ಥಿಗಳ ಭವಿಷ್ಯ ಸುಂದರವಾಗಿ ರೂಪುಗೊಳ್ಳುವಲ್ಲಿ ಪಾಲಕರ ಪಾತ್ರ ಬಹಳ ಪ್ರಮುಖ. ಮಕ್ಕಳ ಆರೋಗ್ಯದತ್ತ ಕಾಳಜಿ ವಹಿಸಿ ತಮ್ಮ ಆರೋಗ್ಯವನ್ನೂ ಕಾಪಾಡಿಕೊಂಡು ಮನೆಯಲ್ಲಿಯೇ ಅವರಿಗೆ ಆರೋಗ್ಯ ರಕ್ಷಣೆಯ ವಿಚಾರ ತಿಳಿಸಬೇಕು. ಅದರಿಂದ ಅವರ ಭವಿಷ್ಯವೂ ಉತ್ತಮವಾಗಿರುತ್ತದೆ ಎಂದು ಪೂರ್ಣಪ್ರಜ್ಞ ಕಾಲೇಜ್ನ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಡಾ.ಸತೀಶ್ ರಾವ್ ಬಿ. ಸಲಹೆ ನೀಡಿದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜ್ (ಸ್ವಾಯತ್ತ)ನಲ್ಲಿ ಆಯೋಜಿಸಿದ್ದ ಶಿಕ್ಷಕ-ರಕ್ಷಕ ಸಭೆಯಲ್ಲಿ 'ಆರೋಗ್ಯ ಸಂರಕ್ಷಣೆ' ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜ್ನ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ. ವಿನಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗಿರುವ ಸೌಲಭ್ಯ, ಪಠ್ಯ, ಮತ್ತು ಪತ್ಯೇತರ ಚಟುವಿಕೆ, ಯೋಜನೆ, ಇತ್ತೀಚೆಗೆ ಕಾಲೇಜ್ನಲ್ಲಾದ ಪ್ರಗತಿಗಳ ಬಗ್ಗೆ ತಿಳಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಮಂಜುನಾಥ್ ಕರಬ ಮತ್ತು ಪರೀಕ್ಷಾಂಗ ಉಪ ನಿಯಂತ್ರಕ ಡಾ. ಮಹೇಶ್ ಭಟ್ ಮಾತನಾಡಿ, ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆ, ಶಿಸ್ತು ಮತ್ತು ಪರೀಕ್ಷಾ ವಿಚಾರಗಳನ್ನು ತಿಳಿಸಿದರು.
ವಿದ್ಯಾರ್ಥಿನಿಯರಾದ ನೂತನಾ, ಶ್ರಾವಣಿ ಪ್ರಾರ್ಥಿಸಿದರು. ಶಿಕ್ಷಕ-ರಕ್ಷಕ ಸಂಘದ ಸಂಯೋಜಕ ಡಾ. ಆನಂದ್ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಪರಿಚಯಿಸಿದರು. ಸಂಸ್ಕೃತ ಉಪನ್ಯಾಸಕ ಗುರುರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು. ಗಣಿತ ಉಪನ್ಯಾಸಕಿ ಶ್ರೀನಯನಾ ವಂದಿಸಿದರು.