ಐಐಜಿಜೆ ಕೇಂದ್ರದಿಂದ ಸ್ಥಳಿಯ ಪ್ರತಿಭೆಗಳಿಗೆ ಅನುಕೂಲ: ಸಚಿವೆ ನಿರ್ಮಲಾ ಸೀತಾರಾಮನ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆ (ಐಐಜಿಜೆ)  ಶ್ರೇಷ್ಠತಾ ಕೇಂದ್ರ ಉದ್ಘಾಟಿಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆ (ಐಐಜಿಜೆ) ಶ್ರೇಷ್ಠತಾ ಕೇಂದ್ರ ಉದ್ಘಾಟಿಸಿದರು.
Published on
ಉಡುಪಿ: ದಕ್ಷಿಣ ಭಾರತದ ಯುವಜನತೆಗೆ ಉದ್ಯೋಗಾರ್ಹ ಕೌಶಲ್ಯ ಹಾಗೂ ಉದ್ಯಮಶೀಲತೆಯ ಅವಕಾಶಗಳನ್ನು ಒದಗಿಸುವಲ್ಲಿ ಐಐಜಿಜೆ ಉಡುಪಿ ಕೇಂದ್ರವು ಮಹತ್ವದ ಪಾತ್ರ ವಹಿಸಲಿದೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯಗಳ ಪಶ್ಚಿಮ ಕರಾವಳಿ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.

ಮಂಗಳವಾರ ಹಳೇ ಜಿಪಂ ಕಚೇರಿಯಲ್ಲಿ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆ (ಐಐಜಿಜೆ) ಶ್ರೇಷ್ಠತಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

2017ರಲ್ಲಿ ಈ ಕೇಂದ್ರವನ್ನು ಉದ್ಘಾಟಿಸುವಾಗ ಮುಂದಿನ ಭವಿಷ್ಯದ ಬಗ್ಗೆ ಸಣ್ಣ ಅಳುಕು ಇತ್ತು. ಆದರೆ ಈಗ ಹೆಮ್ಮೆ ಎನಿಸುತ್ತಿದೆ. ಕರ್ನಾಟಕದ ಎಲ್ಲೆಡೆಯಿಂದ ವಿದ್ಯಾರ್ಥಿಗಳು ಆಗಮಿಸಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಕಳೆದ ಶೈಕ್ಷಣಿಕ ವರ್ಷದಲ್ಲಿ 600 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಅಕ್ಕಸಾಲಿಗರು ಮಾತ್ರವಲ್ಲದೆ ಗ್ರಾಮೀಣ ಪ್ರದೇಶದ ಯುವಕರೂ ವಿಶೇಷ ಆಸಕ್ತಿಯಿಂದ ನೋಂದಾಯಿಸಿಕೊಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ಆಭರಣ ತಯಾರಿಕಾ ಕ್ಷೇತ್ರ ಇನ್ನಷ್ಟು ವಿಸ್ತಾರಗೊಳ್ಳಲಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಅಮೇರಿಕಾ ಮೊದಲಾದ ದೇಶಗಳಲ್ಲಿ ನೆಲೆಸಿರುವ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾರತದಲ್ಲಿ ವಿನ್ಯಾಸಗೊಂಡ ಆಭರಣಗಳನ್ನು ಖರೀದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಾಸ್ಟೆಲ್​ ವ್ಯವಸ್ಥೆಯೂ ದೊರಕಲಿದೆ ಎಂದರು.
ಉದ್ಯಮಕ್ಕೆ ಬಲ, ಯುವಕರಿಗೆ ಉದ್ಯೋಗ
ಜಿಜೆಇಪಿಸಿ ಅಧ್ಯಕ್ಷ ಕಿರಿತ್​ ಬನ್ಸಾಲಿ ಮಾತನಾಡಿ, ದೇಶದ ರತ್ನ ಮತ್ತು ಆಭರಣ ರಫ್ತು ಕ್ಷೇತ್ರವು 28 ಶತಕೋಟಿ ಡಾಲರ್​ ಕೊಡುಗೆ ನೀಡುತ್ತಿದ್ದು, 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಆಸರೆಯಾಗಿದೆ. ಮುಂಬರುವ ದಿನಗಳಲ್ಲಿ ರಫ್ತು ಪ್ರಮಾಣವನ್ನು 100 ಶತಕೋಟಿ ಡಾಲರ್​ಗೆ ಏರಿಸುವ ಗುರಿ ಹೊಂದಲಾಗಿದೆ ಎಂದರು.
ವೇದಿಕೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್​ ಎ. ಸುವರ್ಣ, ಗುರ್ಮೆ ಸುರೇಶ್​ ಶೆಟ್ಟಿ, ಉಪಾಧ್ಯಕ್ಷ ಶೌನಕ್​ ಪಾರಿಖ್​, ಕಾರ್ಯನಿರ್ವಾಹಕ ನಿರ್ದೇಶಕ ಸಬ್ಯಸಾಚಿ ರೇ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net