ಸೇಸಪ್ಪ ರೈ-ಪುಷ್ಪಾ ಎಸ್.ರೈ ದಂಪತಿ ಸುವರ್ಣ ವಿವಾಹ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ವೆಂಕಟ್ರಮಣ ಪಾಂಗಣ್ಣಾಯ, ಬಿ.ಆರ್.ಎಸ್.ಆಳ್ವ ಮೂಡಿಗೆರೆ ಇತರರು ಇದ್ದರು.
Published on:
Copied
Follow Us
ಕಡಬ: ಸಂಸ್ಕಾರ ಸಂಸ್ಕೃತಿಯ ನೆಲೆಬೀಡು ಭಾರತದಲ್ಲಿ ದಾಂಪತ್ಯ ಜೀವನಕ್ಕೆ ತನ್ನದೇ ಆದ ಪಾವಿತ್ರೃ ಇದೆ. ಆದರೂ ವಿದೇಶಿ ಸಂಸ್ಕೃತಿಯ ಅನುಕರಣೆಯಿಂದ ಪ್ರಸ್ತುತ ವಿಚ್ಛೇದನದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಕಾಲಘಟ್ಟದಲ್ಲಿ ಸೇಸಪ್ಪ ರೈ ಮತ್ತು ಪುಷ್ಪಾ ಎಸ್.ರೈ ಅವರ 50 ವರ್ಷದ ದಾಂಪತ್ಯ ಜೀವನ ಯುವಪೀಳಿಗೆಗೆ ಆದರ್ಶ ಎಂದು ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ವಸತಿ ಶಾಲೆಯಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರ 50ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಜಿ ಆಶೀರ್ವಚನ ನೀಡಿ, ಹೊಂದಾಣಿಕೆಯ ಬದುಕು ನಶಿಸುತ್ತಿರುವ ಕಾಲಘಟ್ಟದಲ್ಲಿ ಅರಿತು ಬಾಳಿದರೆ ಬಾಳು ಬಂಗಾರವಾಗುತ್ತದೆ ಎನ್ನುವುದಕ್ಕೆ ಸೇಸಪ್ಪ ರೈ ದಂಪತಿ ಉತ್ತಮ ಉದಾಹರಣೆಯಾಗಿದ್ದಾರೆ. ಇದು ಸುಸಂಸ್ಕೃತ ಶಿಕ್ಷಣ ಕಡಿಮೆಯಾಗಿ ವಿದೇಶಿ ಸಂಸ್ಕೃತಿಗೆ ಆಕರ್ಷಣೆಯಾಗುತ್ತಿದೆ. ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಪ್ರಜ್ಞಾವಂತ ಪ್ರಜೆಗಳನ್ನು ಸಮಾಜಕ್ಕೆ ನೀಡುವ ಕಾರ್ಯ ಶ್ಲಾಘನೀಯ ಎಂದರು.
ಪ್ರಮುಖರಾದ ನಿವೃತ್ತ ಶಿಕ್ಷಕ ವೆಂಕಟ್ರಮಣ ಪಾಂಗಣ್ಣಾಯ, ಬಿ.ಆರ್.ಎಸ್.ಆಳ್ವ ಮೂಡಿಗೆರೆ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ಶೆಟ್ಟಿ, ವಿಟ್ಲ ಕೊಡಪದವು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಆರತಿ ಮಾತನಾಡಿದರು.
ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಸಂಚಾಲಕ ಸವಣೂರು ಸೀತಾರಾಮ ರೈ ಚಾಲನೆ ನೀಡಿದರು. ಸೇಸಪ್ಪ ರೈ-ಪುಷ್ಪಾ ಎಸ್.ರೈ ದಂಪತಿಯ ದಿಬ್ಬಣವನ್ನು ಬ್ಯಾಂಡ್-ವಾಲಗ, ಚೆಂಡೆಯೊಂದಿಗೆ ವೇದಿಕೆಗೆ ಕರೆತರಲಾಯಿತು. ಬಳಿಕ ಪರಸ್ಪರ ಹಾರ ಬದಲಾಯಿಸಿಕೊಂಡರು. ದಂಪತಿಗೆ 50 ದೀಪಗಳಿಂದ ಆರತಿ ಬೆಳಗಲಾಯಿತು. ಕಡಮಜಲು ಸುಭಾಸ್ ರೈ ಮುಂದಾಳತ್ವದಲ್ಲಿ ವಿವಾಹ ಸಂಭ್ರಮದ ವಿಧಿವಿಧಾನ ನೆರವೇರಿತು. ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು, ವಿವಿಧ ಸಂಘ-ಸಂಸ್ಥೆಯ ಪದಾದಿಕಾರಿಗಳು, ವಿವಿಧ ಕ್ಷೇತ್ರದ ಗಣ್ಯರು ಶುಭಹಾರೈಸಿದರು.