ದೇಗುಲಗಳ ಅರ್ಚಕರು, ಸಿಬ್ಬಂದಿ ವೇತನ ಹೆಚ್ಚಿಸಿ

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ.
ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ.
Published on

* ಮುಖ್ಯಮಂತ್ರಿಗೆ ಶಾಸಕ ಯಶ್​ಪಾಲ್​ ಸುವರ್ಣ ಮನವಿ ಸಲ್ಲಿಕೆ

ಉಡುಪಿ: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು, ಸಹಾಯಕರು, ಗುಮಾಸ್ತರು, ವಾದ್ಯದವರು, ಪರಿಚಾರಕರು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಎಲ್ಲ ಬಗೆಯ ಸಿಬ್ಬಂದಿ ವೇತನ ಹೆಚ್ಚಿಸಬೇಕು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರಿಗೆ ಮನವಿ ನೀಡಿದ್ದಾರೆ.
ಪ್ರಸ್ತುತ ನೀಡುತ್ತಿರುವ ವೇತನವು ಜೀವನ ವೆಚ್ಚ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಹೋಲಿಸಿದರೆ ಅತ್ಯಂತ ಕಡಿಮೆಯಿದೆ. ಅದರಿಂದ ಅವರೆಲ್ಲರ ಕುಟುಂಬ ನಿರ್ವಹಣೆಗೆ ಕಷ್ಟವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ವಿಶೇಷವಾಗಿ ಕಡಿಮೆ ಆದಾಯ ಇರುವ ದೇವಸ್ಥಾನಗಳ ಸಿಬ್ಬಂದಿ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ. ಈ ಕಾರಣದಿಂದಾಗಿ ಯುವ ಸಮುದಾಯ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುವಂತಾಗಿದೆ. ತ್ರಿಕಾಲ ಪೂಜೆ, ಧಾರ್ಮಿಕ ಸೇವೆ, ಹಬ್ಬ-ಹರಿದಿನಗಳು, ಜಾತ್ರೆ, ಉತ್ಸವಗಳು ಹಾಗೂ ಭಕ್ತಾದಿಗಳ ಸೇವೆ ಸೇರಿದಂತೆ ದೇಗುಲದ ಸುಗಮ ಕಾರ್ಯನಿರ್ವಹಣೆಯಲ್ಲಿ ಸಿಬ್ಬಂದಿ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ಸೇವೆಗೆ ತಕ್ಕ ಗೌರವ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ದೇವಸ್ಥಾನಗಳ ಅರ್ಚಕರು ಸೇರಿದಂತೆ ಎಲ್ಲ ಸಿಬ್ಬಂದಿ ವೇತನವನ್ನು ಜೀವನ ವೆಚ್ಚಕ್ಕೆ ಅನುಗುಣವಾಗಿ ಪರಿಷ್ಕರಿಸಿ, ಗೌರವಯುತ ವೇತನ ಹೆಚ್ಚಳ ಮಂಜೂರು ಮಾಡಬೇಕು. ಅಲ್ಲದೆ, ಕಾಲಕಾಲಕ್ಕೆ ವೇತನ ಪರಿಷ್ಕರಣೆಯಾಗುವ ರೀತಿಯಲ್ಲಿ ಶಾಶ್ವತ ವ್ಯವಸ್ಥೆ ರೂಪಿಸಬೇಕು ಎಂದು ಶಾಸಕ ಯಶ್​ಪಾಲ್​ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net