ಮಣಿಪಾಲದ ಕೆಎಂಸಿಯಲ್ಲಿ ನೇತ್ರ ಮೈಕ್ರೋಸರ್ಜಿಕಲ್ ಕೌಶಲ ಮತ್ತು ಸಿಮ್ಯುಲೇಶನ್ ಲ್ಯಾಬ್ಅನ್ನು ಡಾ. ಶರತ್ ಕೆ. ರಾವ್ ಉದ್ಘಾಟಿಸಿದರು. ಡಾ.ಅನಿಲ್ ಕೆ. ಭಟ್, ಡಾ. ಅವಿನಾಶ್ ಶೆಟ್ಟಿ, ಡಾ. ಯೋಗಿಶ್ ಎಸ್. ಕಾಮತ್, ಡಾ. ಸೌಮ್ಯಾ ಎಸ್. ಇದ್ದರು.
Published on:
Copied
Follow Us
* ಮಾಹೆ ಸಹ ಉಪಕುಲಪತಿ ಡಾ. ಶರತ್ ಕೆ. ರಾವ್ ಮಾಹಿತಿ
* ಕೆಎಂಸಿಯಲ್ಲಿ ಮೈಕ್ರೋಸರ್ಜಿಕಲ್ ಕೌಶಲ ತರಬೇತಿ ಉದ್ಘಾಟನೆ
ಉಡುಪಿ: ಮಣಿಪಾಲದ ಕೆಎಂಸಿ ಆರೋಗ್ಯ ಕ್ಷೇತ್ರದಲ್ಲಿ ವೈಜ್ಞಾನಿಕವಾಗಿ ನಿರಂತರ ಹೊಸ ವಿಧಾನಗಳ ಮೂಲಕ ರೋಗಿಗಳಿಗೆ ಸಮಗ್ರ ಚಿಕಿತ್ಸೆ ನೀಡುವಲ್ಲಿ ಮೂಚೂಣಿಯಲ್ಲಿದೆ. ಅದರ ಮುಂದುವರಿದ ಭಾಗವಾಗಿ ನೇತ್ರ ವಿಜ್ಞಾನಕ್ಕೆ ಸಂಬಂಧಿಸಿ ನೈಜ ಶಸ್ತ್ರ ಚಿಕಿತ್ಸೆಗೂ ಮುನ್ನ ವೈದ್ಯರಿಗೆ ನಿಖರತೆ, ರೋಗಿ ಸುರಕ್ಷತೆ ಮತ್ತು ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ನೇತ್ರ ಮೈಕ್ರೋಸರ್ಜಿಕಲ್ ಕೌಶಲ ಮತ್ತು ಸಿಮ್ಯುಲೇಶನ್ ಲ್ಯಾಬ್ ಆರಂಭಿಸಲಾಗಿದೆ. ಈ ಸೌಲಭ್ಯ ಅಳವಡಿಸಿಕೊಂಡ ಕರ್ನಾಟಕದ ಮೊದಲ ವೈದ್ಯಕೀಯ ಕಾಲೇಜು ಇದಾಗಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ)ನ ಸಹ ಉಪಕುಲಪತಿ ಡಾ. ಶರತ್ ಕೆ. ರಾವ್ ತಿಳಿಸಿದರು.
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ (ಕೆಎಂಸಿ)ದ ನೇತ್ರಶಾಸ್ತ್ರ ವಿಭಾಗದ ವತಿಯಿಂದ ಆರಂಭಿಸಿದ ನೇತ್ರ ಮೈಕ್ರೋಸರ್ಜಿಕಲ್ ಕೌಶಲ ಮತ್ತು ಸಿಮ್ಯುಲೇಶನ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದರು.
ಕೆಎಂಸಿ ಮಣಿಪಾಲದ ಡೀನ್ ಡಾ. ಅನಿಲ್ ಕೆ. ಭಟ್, ಕಸ್ತೂರ್ಬಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ನೇತ್ರ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಯೋಗಿಶ್ ಎಸ್. ಕಾಮತ್, ವಿಭಾಗದ ಅಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.
ಲ್ಯಾಬ್ ಸೌಲಭ್ಯಗಳ ವಿವರ ಮತ್ತು ಮುಂದಿನ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತಾಗಿ ಕೋರ್ಸ್ನ ಸಂಯೋಜಕಿ ಹಾಗೂ ಸಹಪ್ರಾಧ್ಯಾಪಕಿ ಡಾ. ಸೌಮ್ಯಾ ಎಸ್., ಸ್ನಾತಕೋತ್ತರ ವಿದ್ಯಾರ್ಥಿ ಪ್ರತಿನಿಧಿಗಳಾದ ಡಾ. ಯೋಗಿಶ್ ಎಸ್. ಕಾಮತ್, ಡಾ. ರುತ್ವಿ ದೋಷಿ ಮಾಹಿತಿ ನೀಡಿದರು.
ವೈದ್ಯವಿದ್ಯಾರ್ಥಿಗಳಿಗೆ, ಸಂಶೋಧನೆಗೆ ಅನುಕೂಲ
ಹೊಸ ಲ್ಯಾಬ್ನಲ್ಲಿ ಅತ್ಯಾಧುನಿಕ ಸಿಮ್ಯುಲೇಶನ್ ಮತ್ತು ವೆಟ್ ಲ್ಯಾಬ್ ಸೌಲಭ್ಯ ಲಭ್ಯವಿದೆ. ಇದರಲ್ಲಿ ಕಣ್ಣಿನ ಪೊರೆ ಹಾಗೂ ವಿಟ್ರಿಯೋರೆಟಿನಲ್ ಶಸ್ತ್ರಚಿಕಿತ್ಸಾ ಮಾಡ್ಯೂಲ್ ಹೊಂದಿರುವ ಐಸಿ ಸರ್ಜಿಕಲ್ ಸಿಮ್ಯುಲೇಟರ್, ಉನ್ನತ ಮಟ್ಟದ ಮೈಕ್ರೋಸರ್ಜಿಕಲ್ ವೆಟ್ ಲ್ಯಾಬ್, ಅಲ್ಕೋನ್ ಲಾರಿಯೇಟ್ ಫೇಕೋ ಸಿಸ್ಟಮ್ ಹಾಗೂ ಝೆಯಿಸಿಸ್ ಒಪ್ಮಿ ವಿಸು ಎಸ್-7 ಆಪರೇಟಿಂಗ್ ಮೈಕ್ರೋಸ್ಕೋಪ್ ಸೌಲಭ್ಯವಿದೆ. ವೈದ್ಯರಾಗುವವರಿಗೆ ನೇತ್ರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ಈ ಲ್ಯಾಬ್ ಅನುಕೂಲವಾಗಲಿದೆ.
"
ಈ ಸೌಲಭ್ಯವು ಕೆಎಂಸಿ ಮಣಿಪಾಲದಲ್ಲಿ ನೇತ್ರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ತೊಡಗಿಕೊಳ್ಳುವವರಿಗೆ ಸಹಕಾರಿಯಾಗಿದೆ. ವೈದ್ಯಕೀಯ ಶಿಕ್ಷಣದಲ್ಲಿ ಶೈಕ್ಷಣಿಕ ಶ್ರೇಷ್ಠತೆ ಮತ್ತು ನವೀನತೆಗೆ ಮಾಹೆ ಬದ್ಧವಾಗಿದೆ. ಭವಿಷ್ಯದ ಶಸ್ತ್ರಚಿಕಿತ್ಸಕರ ತರಬೇತಿ ಉದ್ದೇಶದಿಂದ ಈ ಲ್ಯಾಬ್ ಸ್ಥಾಪಿಸಲಾಗಿದೆ.