ಮದ್ಯವ್ಯಸನ ವಿಮುಕ್ತಿ ಶಿಬಿರ ಉದ್ಘಾಟನೆ

ಜಿಲ್ಲಾ ಮಾನಸಿಕ ಆರೋಗ್ಯ ಪ್ರಾಧಿಕಾರ ಸದಸ್ಯ ವಿಶು ಶೆಟ್ಟಿ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರ ಉದ್ಘಾಟಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಪ್ರಾಧಿಕಾರ ಸದಸ್ಯ ವಿಶು ಶೆಟ್ಟಿ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರ ಉದ್ಘಾಟಿಸಿದರು.
Published on

ಉಡುಪಿ: ಜೀವನದಲ್ಲಿ ಮನುಷ್ಯ ತಪ್ಪು ಮಾಡುವುದು ಸಹಜ. ಅದನ್ನು ತಿದ್ದಿಕೊಳ್ಳುವ ಅವಕಾಶವೂ ನಮ್ಮ ಪಾಲಿಗಿದೆ. ಈ ನಿಟ್ಟಿನಲ್ಲಿ ಮದ್ಯವರ್ಜನ ಶಿಬಿರಗಳ ಮೂಲಕ ಬಾಳಿನಲ್ಲಿ ಹೊಸ ಬೆಳಕು ಕಾಣಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಪ್ರಾಧಿಕಾರ ಸದಸ್ಯ ವಿಶು ಶೆಟ್ಟಿ ಹೇಳಿದರು.

ದೊಡ್ಡಣಗುಡ್ಡೆ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಕಮಲ್​ ಎ. ಬಾಳಿಗಾ ಚಾರಿಟೇಬಲ್​ ಟ್ರಸ್ಟ್​ ಮತ್ತು ಭಾರತೀಯ ವೈದ್ಯಕಿಯ ಸಂಘ ಆಶ್ರಯದಲ್ಲಿ ನಡೆದ 35ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮನೋವೈದ್ಯ ಡಾ. ಪ್ರಕಾಶ್​ ಸಿ. ತೋಳಾರ್​ ಮಾತನಾಡಿ, ಮದ್ಯವ್ಯಸನವೆಂಬುದು ಮನೋರೋಗ. ಇದನ್ನು ಹೋಗಲಾಡಿಸಲು ಜೀವನದ ಮಹತ್ವವನ್ನು ಅರಿತು ಕೊಳ್ಳಬೇಕು ಎಂದು ಹೇಳಿದರು.

ಭಾರತೀಯ ವೈದ್ಯಕಿಯ ಸಂಘದ ಅಧ್ಯಕ್ಷ ಡಾ. ಅಶೋಕ್​ ಕುಮಾರ್​ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಲತಾ ನಾಯಕ್​ ಅತಿಥಿಗಳಾಗಿದ್ದರು. ಡಾ. ವಿ. ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ. ವಿ. ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ, ಡಾ. ದೀಪಕ್​ ಮಲ್ಯ ಮತ್ತು ಡಾ. ಮಾನಸ್​ ಇ.ಆರ್​. ಉಪಸ್ಥಿತರಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು 5 ವರ್ಷಕ್ಕಿಂತ ಹೆಚ್ಚಿನ ಸಮಯ ಮದ್ಯ ಮುಕ್ತ ಜೀವನ ನಡೆಸಿದ 6 ಮಂದಿಯನ್ನು ಸನ್ಮಾನಿಸಲಾಯಿತು. ಆಪ್ತಸಮಾಲೋಚಕಿ ಪದ್ಮಾ ರಾಘವೇಂದ್ರ ಪ್ರಾರ್ಥಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಮನಶಾಸ್ತ್ರ್ರಜ್ಞ ನಾಗರಾಜ್​ ಮೂರ್ತಿ ವಂದಿಸಿದರು. ಆಪ್ತಸಮಾಲೋಚಕಿ ದೀಪಶ್ರೀ ನಿರೂಪಿಸಿದರು. ಸುಮಾರು 50 ಶಿಬಿರಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net