

ಸುಬ್ರಹ್ಮಣ್ಯ: ಪರಿಸರ ಸಂರಕ್ಷಣೆ ಹೆಸರಿನಲ್ಲಿ ಮಲೆನಾಡಿನ ರೈತರು ಹಾಗೂ ಗ್ರಾಮೀಣ ಜನರಿಗೆ ತೊಂದರೆಯಾಗುವಂತಹ ಯೋಜನೆಗಳ ವಿರುದ್ಧ ಹೋರಾಟ ಮುಂದುವರಿಸುವುದು ಇದೀಗ ಮತ್ತೆ ಅನಿವಾರ್ಯವಾಗಿದೆ. ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡಿನ ಗ್ರಾಮೀಣ ಪ್ರದೇಶಗಳ ರೈತರು ಹಾಗೂ ಜನಸಾಮಾನ್ಯರಿಗೆ ಹಲವು ರೀತಿಯ ಸಮಸ್ಯೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಆತಂಕ ವ್ಯಕ್ತಪಡಿಸಿದರು.
ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಜನರಿಗೆ ಮಾತ್ರವಲ್ಲದೆ, ಬಾಧಿತ ಗ್ರಾಮಗಳ ಗಡಿಯಿಂದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿರುವ ಗ್ರಾಮಗಳ ಮೇಲೂ ಇದರ ಪರಿಣಾಮ ಬೀರಬಹುದು. ಆದ್ದರಿಂದ ಯೋಜನೆಯ ವಿರುದ್ಧ ಪಕ್ಷಾತೀತವಾಗಿ, ಜಾತ್ಯತೀತ ನೆಲೆಯಲ್ಲಿ ಜನಹಿತ ರಕ್ಷಣೆ ಹಾಗೂ ರೈತರ ಹಕ್ಕು ಮತ್ತು ಮಲೆನಾಡಿನ ಜನಜೀವನದ ರಕ್ಷಣೆಗಾಗಿ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದರು.