ಅರ್ಹರಿಗೆ ತಲುಪಲಿ ಗ್ಯಾರಂಟಿ ಸೌಲಭ್ಯ

ಉಡುಪಿಯಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಭೆಯಲ್ಲಿ ರಮೇಶ್​ ಕಾಂಚನ್​ ಮಾತನಾಡಿರು. ಫರ್ಜಾನಾ ಎಂ. ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಭೆಯಲ್ಲಿ ರಮೇಶ್​ ಕಾಂಚನ್​ ಮಾತನಾಡಿರು. ಫರ್ಜಾನಾ ಎಂ. ಇದ್ದರು.
Published on

* ಉಡುಪಿ ತಾಲೂಕು ಅಧ್ಯಕ್ಷ ರಮೇಶ್​ ಕಾಂಚನ್​ ಸಲಹೆ 

* ಯೋಜನೆಯ ಅನುಷ್ಠಾನ ಸಮಿತಿಯ ಸಭೆ

ಉಡುಪಿ: ರಾಜ್ಯ ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನಗಳು ಜನರ ಜೀವನ ಮಟ್ಟ ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹೀಗಾಗಿ ಗ್ಯಾರಂಟಿ ಯೋಜನೆಯ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಹಾಗೂ ಗ್ಯಾರಂಟಿ ಯೋಜನಾ ಸಮಿತಿಯ ಪದಾಧಿಕಾರಿಗಳು ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್​ ಕಾಂಚನ್​ ಸಲಹೆ ನೀಡಿದರು.
ಉಡುಪಿಯ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಉಡುಪಿ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸಭೆಯಲ್ಲಿ ಮಾತನಾಡಿದರು.

ಸೈಬರ್​ ವಂಚಕರಿಂದ ಮೋಸ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಗುರಿಯಾಗಿರಿಸಿಕೊಂಡು ಸೈಬರ್​ ವಂಚಕರು ಯೋಜನೆಯ ಹಣ ಮಂಜೂರು ಮಾಡುವುದಾಗಿ ಹೇಳಿ ಬ್ಯಾಂಕ್​ ಖಾತೆ ಮತ್ತು ಒಟಿಪಿ ಪಡೆದು ಹಣ ಕಬಳಿಸುತ್ತಿರುವ ಪ್ರಕರಣ ಹೆಚ್ಚುತ್ತಿವೆ. ಈ ಬಗ್ಗೆ ಯಾವುದೇ ಅನುಮಾನಾಸ್ಪದ ಕರೆ ಬಂದಾಗ ರಾಷ್ಟ್ರೀಯ ಸೈಬರ್​ ಕ್ರೈಂ ನಿಯಂತ್ರಣ ಸಹಾಯವಾಣಿ ನಂಬರ್​ 1930 ಕರೆ ಮಾಡಿ ದೂರು ನೀಡಬೇಕು. ವಂಚನೆಗೊಳಗಾದ ಒಂದು ಗಂಟೆಯೊಳಗೆ ಸಹಾಯವಾಣಿಗೆ ದೂರು ನೀಡಿದರೆ ಶೇ.90 ಹಣ ಮರುಪಾವತಿ ಆಗುವ ಸಾಧ್ಯತೆಗಳಿವೆ ಎಂದರು.

ಮೃತಪಟ್ಟವರ ಮಾಹಿತಿ ನೀಡಿ

ಗೃಹಲಕ್ಷ್ಮಿ ಯೋಜನೆಯಡಿ ಉಡುಪಿ ತಾಲೂಕಿಗೆ ಸಂಬಂಧಿಸಿ ಮರಣ ಹೊಂದಿದ ಫಲಾನುಭವಿಗಳ ಬ್ಯಾಂಕ್​ ಖಾತೆಗೆ ಜಮಾ ಆಗಿರುವ ಮೊತ್ತದ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. 2,318 ಮಂದಿ ಮರಣ ಹೊಂದಿದವರ ಪಟ್ಟಿ ನೀಡಿದ್ದು, ಇವರುಗಳು ಯಾವ ಊರಿನವರು ಎಂಬ ಹೆಸರಿಲ್ಲ. ಮರಣ ಹೊಂದಿದವರ ವಿವರವನ್ನು ಸಂಬಂಧಪಟ್ಟ ಅಂಗನವಾಡಿ ಶಿಕ್ಷಕರ ಮೂಲಕ ತ್ವರಿತವಾಗಿ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಯುವನಿಧಿ ಯೋಜನೆ ಸೇರಿದಂತೆ ಇನ್ನಿತರ ಗ್ಯಾರಂಟಿ ಯೋಜನೆ, ವಿದ್ಯಾರ್ಥಿಗಳಿಗೆ ಬಸ್​ ಪಾಸ್​ ಸೌಲಭ್ಯ, ಉಡುಪಿ ತಾಲೂಕಿಗೆ ಹೊಸ ರೂಟ್​ಗಳಿಗೆ ಬಸ್​ ಸೌಕರ್ಯ, ತುರ್ತು ವೈದ್ಯಕೀಯ ಚಿಕಿತ್ಸೆ, ಹೊಸ ಪಡಿತರ ಚೀಟಿ ಇನ್ನಿತರ ವಿಷಯಗಳ ಚರ್ಚೆ ನಡೆಯಿತು.
ಸಭೆಯಲ್ಲಿ ತಾಪಂನ ಸಹಾಯಕ ನಿರ್ದೇಶಕಿ ಫರ್ಜಾನಾ ಎಂ., ಸಮಿತಿಯ ಸದಸ್ಯರು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
"

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ, ವದಂತಿಗಳಿಗೆ ಫಲಾನುಭವಿಗಳು ಹಾಗೂ ಸಾರ್ವಜನಿಕರು ಕಿವಿಗೊಡಬಾರದು. ಆ ಕುರಿತು ಯಾವುದೇ ಮಾರ್ಗಸೂಚಿ ಬಂದಿಲ್ಲ. ಗ್ಯಾರಂಟಿ ಯೋಜನೆಗಳು ಈ ಹಿಂದಿನಂತೆಯೇ ಮುಂದುವರಿಯಲಿದ್ದು, ಆತಂಕ ಪಡಬೇಕಿಲ್ಲ.

— ರಮೇಶ್​ ಕಾಂಚನ್​. ಉಡುಪಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net