ಕೆಯ್ಯೂರಿನಲ್ಲಿ ಮರ ಅಕ್ರಮ ಸಾಗಾಟ

Crime
Crime
Published on

ಪುತ್ತೂರು ಗ್ರಾಮಾಂತರ: ಅಕ್ರಮವಾಗಿ ಮರ ಕಡಿದು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಸಂತೋಷ್‌ನಗರ ಎಂಬಲ್ಲಿ ಪತ್ತೆ ಮಾಡಿ ಮರ ಮತ್ತು ಮರ ಸಾಗಾಟಕ್ಕೆ ಬಳಸಿದ ಲಾರಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಇಸ್ಮಾಯಿಲ್ ಬಂಧಿತ. ಬೆಳ್ಳಾರೆ ಸಮೀಪ ನೆಟ್ಟಾರು ಎಂಬಲ್ಲಿಂದ ಅಕ್ರಮವಾಗಿ ಕಿರಾಲು ಭೋಗಿ ಜಾತಿಯ ಮರಗಳನ್ನು ಕಡಿದು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಕುರಿತು ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಬೆಳ್ಳಾರೆ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಲಾರಿಯನ್ನು ಕೆಯ್ಯೂರು ಗ್ರಾಮದ ಸಂತೋಷ್‌ನಗರ ಎಂಬಲ್ಲಿ ತಡೆದು ನಿಲ್ಲಸಿ, ಪರಿಶೀಲನೆ ನಡೆಸಿದಾಗ ಮರ ಅಕ್ರಮ ಸಾಗಾಟ ಮಾಡುತ್ತಿರುವುದು ಕಂಡು ಬಂದಿತ್ತು. ವಶ ಪಡಿಸಿಕೊಂಡಿರುವ ಲಾರಿ ಹಾಗೂ ಮರದ ಒಟ್ಟು ಮೌಲ್ಯ ರೂ.5 ಲಕ್ಷ ಎಂದು ಅಂದಾಜಿಸಲಾಗಿದೆ.
ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಸಂತೋಷ್ ರೈ, ಉಪವಲಯ ಅರಣ್ಯ ಅಧಿಕಾರಿಗಳಾದ ಶಿವಾನಂದ ಹಾಗೂ ಸೋಮನಾಥ್, ವಾಹನ ಚಾಲಕ ಜಯಪ್ರಕಾಶ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ರೋಶಿನಿ ಎ.ಜೆ. ಅವರ ಆದೇಶದಂತೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ದೇವಸ್ಥಾನವೊಂದರ ಹೆಸರಿನಲ್ಲಿ ಮರವನ್ನು ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net