ಬಜತ್ತೂರಿನಲ್ಲಿ ಅಕ್ರಮ ಮರಳುಗಾರಿಕೆ

 ಬಜತ್ತೂರು ಗ್ರಾಮದ ವಳಾಲು ಸಮೀಪ ನೇತ್ರಾವತಿ ನದಿಯಲ್ಲಿ ನಡೆಯುತ್ತಿರುವ ಮರಳುಗಾರಿಕೆ.
ಬಜತ್ತೂರು ಗ್ರಾಮದ ವಳಾಲು ಸಮೀಪ ನೇತ್ರಾವತಿ ನದಿಯಲ್ಲಿ ನಡೆಯುತ್ತಿರುವ ಮರಳುಗಾರಿಕೆ.
Published on
ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದ ಭಾರಿ ಪ್ರಮಾಣದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಕಡಿವಾಣ ಬಿದ್ದಿದೆ. ಆದರೆ ಕೆಲವು ಕಡೆಗಳಲ್ಲಿ ನಿರ್ದಿಷ್ಟ ಕಾಮಗಾರಿಗಳ ಹೆಸರಿನಲ್ಲಿ ಮರಳುಗಾರಿಗೆ ನೀಡುವ ಪರವಾನಗಿ ದುರುಪಯೋಗಪಡಿಸಿಕೊಂಡು ಅಕ್ರಮ ಮರಳುಗಾರಿಕೆ ನಡೆಯುತ್ತಲೇ ಇದೆ ಎಂದು ಸಾರ್ವಜನಿಕ ವಲಯದಿಂದ ದೂರು ಕೇಳಿ ಬಂದಿದೆ.
ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ವಳಾಲು ಸಮೀಪ ನೇತ್ರಾವತಿ ನದಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಇಲ್ಲಿಂದ ದಿನಕ್ಕೆ ನೂರಾರು ಲಾರಿಗಳಲ್ಲಿ ಮರಳು ಸಾಗಾಟ ನಡೆಯುತ್ತಿದೆ. ಮರಳನ್ನು ನಿರ್ದಿಷ್ಟ ಕಾಮಗಾರಿಗೆ ಬಳಸದೆ ದೊಡ್ಡ ಮಟ್ಟದ ಗುತ್ತಿಗೆದಾರರು, ಹೊರ ಜಿಲ್ಲೆಗಳಿಗೆ ಅಕ್ರಮವಾಗಿ ಸಾಗಾಟವಾಗುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.

ಉಳ್ಳಾಲ ಸಮೀಪದ ಕೊಣಾಜೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿಗೆ ಗಣಿ ಇಲಾಖೆ ಮರಳು ತೆಗೆಯಲು ಅನುಮತಿ ನೀಡಿದೆ. ಅದಕ್ಕಾಗಿ ಮರಳು ಸಂಗ್ರಹಿಸಲಾಗುತ್ತಿದೆ. ಆದರೆ ಮರಳನ್ನು ತುಂಬಿಸಿದ ಲಾರಿಗಳು ಕೊಣಾಜೆ ಕಡೆಗೆ ಸಂಚರಿಸುವ ಬದಲು ಪುತ್ತೂರಿನ ಖಾಸಗಿ ಕಟ್ಟಡ ಕಾಮಗಾರಿ ನಡೆಯುತ್ತಿರುವ ಗುತ್ತಿಗೆದಾರರ ಸುಪರ್ದಿಗೆ ಹಾಗೂ ಹಲವು ಲಾರಿಗಳು ಜಿಲ್ಲಾ ಗಡಿ ದಾಟಿ ಸಕಲೇಶಪುರ ಕಡೆಗೆ ತೆರಳುತ್ತಿರುವುದಾಗಿ ಸ್ಥಳೀಯರು ಹೇಳುತ್ತಾರೆ.

ಶಬ್ದಮಾಲಿನ್ಯದಿಂದ ಜನರಿಗೆ ಸಮಸ್ಯೆ

ಬಜತ್ತೂರುನಲ್ಲಿ 30ಕ್ಕೂ ಅಧಿಕ ದೋಣಿಗಳು, ಲಾರಿಗಳು ಹಾಗೂ ಅನ್ಯರಾಜ್ಯದ ನೂರಾರು ಕಾರ್ಮಿಕರನು ಬಳಸಿ ಮರಳುಗಾರಿಕೆ ನಡೆಸಲಾಗುತ್ತಿದೆ. ದಿನದ 24 ಗಂಟೆಯೂ ಮರಳುಗಾರಿಕೆ ನಡೆಯುತ್ತಿದ್ದು ಅದರಿಂದ ಉಂಟಾಗುವ ಕಕರ್ಶ ಶಬ್ದದಿಂದ ಸುತ್ತಮುತ್ತ ಶಬ್ದಮಾಲಿನ್ಯಕ್ಕೆ ಕಾರಣವಾಗಿದೆ. ಸ್ಥಳೀಯರ ದೈನಂದಿನ ಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಮರಳುಗಾರಿಕೆಗಾಗಿ ನೀರಿನ ಹರಿವು ತಡೆಯಲು ನದಿಗೆ ತಡೆ ಒಡ್ಡಲಾಗಿದ್ದು, ಇನ್ನೊಂದು ದಡದಿಂದ ಉದ್ದಕ್ಕೆ ಜಲ್ಲಿಕಲ್ಲು ಸುರಿದು ಹರಿವ ನೀರಿಗೆ ತಡೆಯೊಡ್ಡಲಾಗಿದೆ. ನದಿಯಲ್ಲಿ ಮುಳುಗಿ ಮರಳು ಸಂಗ್ರಹಿಸುತ್ತಿರುವ ಕಾರ್ಮಿಕರಿಗೆ ಯಾವುದೇ ರೀತಿಯ ರಕ್ಷಣೆ ವ್ಯವಸ್ಥೆಗಳೂ ಇಲ್ಲವಾಗಿವೆ.

ಕಾಮಗಾರಿ ಹೆಸರಿನಲ್ಲಿ ಪರ್ಮಿಟ್ ಪಡೆದು ಅಕ್ರಮವಾಗಿ ಸಾಗಾಟ ವಾಡುವ ದೊಡ್ಡ ಗುತ್ತಿಗೆದಾರು, ಉದ್ಯಮಿಗಳು, ಶ್ರೀಮಂತರಿಗೆ ಮರಳು ದೊರಕುತ್ತಿದೆ. ಅಧಿಕಾರಿಗಳ ಕೈವಾಡ ಇರುವ ಶಂಕೆಯೂ ಇದ್ದು, ಇದಕ್ಕೆಲ್ಲ ಕಡಿವಾಣ ಹಾಕಿ ಬಡವರಿಗೆ ಮರಳು ಸಿಗಬೇಕು. ಈ ವ್ಯವಸ್ಥೆ ಸರಿ ಆಗದಿದ್ದರೆ ಸಂ ಸಂಸ್ಥೆಗಳ ಜತೆಗೂಡಿ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು.

— ಕಿಶೋರ್ ಶಿರಾಡಿ, ಸಂಚಾಲಕ, ಮಲೆನಾಡು ಜನಹಿತ ರಕ್ಷಣಾ ವೇದಿಕೆ

ಪಿಡಬ್ಯುಡಿ ಕಾಮಗಾರಿ ಸಂಬಂಧಿಸಿ ಅನುಮತಿ ನೀಡಲಾಗಿದೆ. ಇಲಾಖೆಯಿಂದ ವಾಹಿತಿ ಪಡೆದು ಕಾಮಗಾರಿಗೆ ಹೊರತಾಗಿ ಅಕ್ರಮ ನಡೆಯುತ್ತಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

— ಸಂದೀಪ್, ಉಪ ನಿರ್ದೇಶಕ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಂಗಳೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net