ಉಡುಪಿ: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿರುವ ಭೀಕರ ಜಲಪ್ರಳಯ ಹಾಗೂ ಭೂಕುಸಿತದಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಿರುವವರ ರಕ್ಷಣೆಗೆ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ. ಉಡುಪಿ ಜಿಲ್ಲೆಯಿಂದ ಅಲ್ಲಿಗೆ ಪ್ರವಾಸ ಅಥವಾ ಯಾತ್ರೆಗೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದರೆ ಅಂತಹ ಕುಟುಂಬಗಳ ಸದಸ್ಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.
ಅಪಾಯಕ್ಕೆ ಸಿಲುಕಿದವರನ್ನು ಸುರಕ್ಷಿತವಾಗಿ ಕರೆತರಲು ಉಡುಪಿ ಜಿಲ್ಲಾಡಳಿತವೂ ಸಹ ತುರ್ತು ಕ್ರಮ ಕೈಗೊಂಡಿದ್ದು, ನೇಪಾಳದಲ್ಲಿರುವ ಕುಟುಂಬಸ್ಥರ ಅನುಕೂಲಕ್ಕಾಗಿ ಜಿಲ್ಲಾ ಮಟ್ಟದಲ್ಲಿ ತುರ್ತು ಸಹಾಯವಾಣಿ ತೆರೆಯಲಾಗಿದೆ.
ಮಾಹಿತಿ ಒದಗಿಸುವ ವಿಧಾನ: ಸಂಕಷ್ಟದಲ್ಲಿರುವವರ ಹೆಸರು, ವಿಳಾಸ, ಪ್ರಸ್ತುತ ಇರುವ ನಿಖರ ಸ್ಥಳ, ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ತುರ್ತು ಅಗತ್ಯಗಳ ವಿವರಗಳನ್ನು ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.