ಗೋಹತ್ಯಾ ನಿಷೇಧಕ್ಕಾಗಿ ಸಾಧು-ಸಂತರಿಂದ ಆಮರಣ ಉಪವಾಸ

ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀಸಾಯಿ ಈಶ್ವರ್​ ಗುರೂಜಿ ಮಾತನಾಡಿದರು. ಗಜೇಂದ್ರ ಎಸ್​. ಬೇಲೆಮನೆ, ವಿಜಯ ಕೊಡವೂರು, ನಾಗರಾಜ್​ ಪೂಜಾರಿ ಬೈಂದೂರು ಇದ್ದರು.
ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀಸಾಯಿ ಈಶ್ವರ್​ ಗುರೂಜಿ ಮಾತನಾಡಿದರು. ಗಜೇಂದ್ರ ಎಸ್​. ಬೇಲೆಮನೆ, ವಿಜಯ ಕೊಡವೂರು, ನಾಗರಾಜ್​ ಪೂಜಾರಿ ಬೈಂದೂರು ಇದ್ದರು.
Published on

* ದ್ವಾರಕಾಮಾಯಿ ಮಠದ ಶ್ರೀಸಾಯಿ ಈಶ್ವರ್​ ಗುರೂಜಿ ಮಾಹಿತಿ

* ಜು.27ರಂದು ಜಿಲ್ಲಾ ಮಟ್ಟದ ಗೋಮಾತಾ ಗೌರವ ಅಭಿಯಾನ

ಉಡುಪಿ: ಗೋಮಾತೆ ರಕ್ಷಣೆ ಹಾಗೂ ಗೋ ಹತ್ಯಾ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ದೇಶವ್ಯಾಪಿ 'ಗೋಮಾತೆಯ ಗೌರವದ ಅಭಿಯಾನ'ದ ನಿಮಿತ್ತ ಜು.27ರಂದು ಜಿಲ್ಲಾಧಿಕಾರಿ ಮೂಲಕ ರಾಜ್ಯ-ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. 2027ರ ಫೆ.27ರ ಒಳಗೆ ಕೇಂದ್ರ ಸರ್ಕಾರ ಗೋಹತ್ಯಾ ನಿಷೇಧ ಕಾಯಿದೆ ಜಾರಿಗೊಳಿಸದಿದ್ದಲ್ಲಿ ದೆಹಲಿಯಲ್ಲಿ 108 ಸಾಧು-ಸಂತರು ಆಮರಣ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಶ್ರೀಕ್ಷೇತ್ರ ಶಂಕರಪುರದ ದ್ವಾರಕಾಮಾಯಿ ಮಠದ ಶ್ರೀಸಾಯಿ ಈಶ್ವರ್​ ಗುರೂಜಿ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಸೋಮವಾರ (ಜು.13) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋಮಾತೆಗೆ ರಾಷ್ಟ್ರ ತಾಯಿ, ರಾಷ್ಟ್ರೀಯ ದೇವರು ಹಾಗೂ ರಾಷ್ಟ್ರೀಯ ಪರಂಪರೆಯ ಗೌರವ ಸಿಗಬೇಕೆಂದು ದೇಶದಲ್ಲಿ 4 ಹಂತದಲ್ಲಿ ಅಭಿಯಾನ ಈಗಾಗಲೇ ಆರಂಭಗೊಂಡಿದೆ. ತಾಲೂಕು ಮಟ್ಟದಲ್ಲಿ ಸಹಿ ಸಂಗ್ರಹದ ಮೊದಲ ಹಂತದ ಅಭಿಯಾನ ಪೂರ್ಣಗೊಂಡಿದ್ದು, ಗಿನ್ನಿಸ್​ ಬುಕ್​ ಆಫ್​ ರೆಕಾರ್ಡ್​ ಮಾಡಿದೆ. ಇದೀಗ ಜಿಲ್ಲಾಮಟ್ಟದಲ್ಲಿ 2ನೇ ಹಂತದ ಅಭಿಯಾನ ನಡೆಯಲಿದೆ ಎಂದರು.

ವ್ಯಕ್ತಿ ಪ್ರಾಧಾನ್ಯತೆಯಿಲ್ಲ

ಈ ಅಭಿಯಾನದಲ್ಲಿ ವ್ಯಕ್ತಿ ಪ್ರಾಧಾನ್ಯತೆ ಇಲ್ಲ. ಮುಖ್ಯ ಪೋಷಕರಾಗಿ ಗೋಮಾತಾ, ಅಧ್ಯಕ್ಷತೆ ನಂದಿ ಉಪಸ್ಥಿತಿಯಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ತಾಲೂಕಿನಲ್ಲಿ ಪ್ರಚಾರಕರ ಮೂಲಕ ಅಭಿಯಾನ ನಡೆಯುತ್ತಿದೆ. ಜು.27ರಂದು ಬೆಳಗ್ಗೆ 10:30ಕ್ಕೆ ಜಿಲ್ಲೆಯ 7 ತಾಲೂಕಿನ ಗೋಪ್ರೇಮಿಗಳು, ಗೋರಕ್ಷಕರು ಮತ್ತು ಭಕ್ತರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ಗುರೂಜಿ ತಿಳಿಸಿದರು.  

ದೆಹಲಿಯಲ್ಲಿ ರಾಷ್ಟ್ರೀಯ ಅಭಿಯಾನ

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭಿಯಾನದ ನೇತೃತ್ವ ವಹಿಸಿಕೊಂಡ ಗಜೇಂದ್ರ ಎಸ್​. ಬೇಲೆಮನೆ ಮಾತನಾಡಿ, ನಾಗರಾಜ್​ ಪೂಜಾರಿ ಅವರ ಸಹಭಾಗಿತ್ವದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ ಅಭಿಯಾನದ ಕರಪತ್ರ ಹಂಚಿಕೆ ಮಾಡಲಾಗಿದೆ. ಹಸ್ತಾಕ್ಷರದ ಸಂಗ್ರಹ ಕಾರ್ಯವೂ ನಡೆದಿದೆ. 3 ಲಕ್ಷ ಜನರ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಅಕ್ಟೋಬರ್​ನಲ್ಲಿ ರಾಜ್ಯ ಮಟ್ಟದ ಅಭಿಯಾನ ಹಾಗೂ 2027ರ ಜನವರಿ ತಿಂಗಳಲ್ಲಿ ದೆಹಲಿಯಲ್ಲಿ ರಾಷ್ಟ್ರ ಮಟ್ಟದ ಅಭಿಯಾನ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಉಡುಪಿ ತಾಲೂಕು ಸಂಚಾಲಕ ವಿಜಯ ಕೊಡವೂರು, ನಾಗರಾಜ್​ ಪೂಜಾರಿ ಬೈಂದೂರು, ಶ್ರೀಮಠದ ಸತೀಶ್​ ಉಪಸ್ಥಿತರಿದ್ದರು.

ಪ್ರಮುಖ ಬೇಡಿಕೆಗಳು

ರಾಷ್ಟ್ರದಲ್ಲಿ ಗೋಹತ್ಯಾ ನಿಷೇಧ ಕಾಯಿದೆ ಜಾರಿ ಪ್ರಮುಖವಾಗಿದ್ದು ಭಾರತೀಯ ಗೋ ತಳಿಗಳಿಗೆ ರಾಷ್ಟ್ರೀಯ ಸ್ಥಾನ-ಮಾನ ನೀಡುವುದು. ಗೋಸೇವೆಗೆ ಕೇಂದ್ರೀಯ ಕಾನೂನು ರಚನೆ ಹಾಗೂ ಕೇಂದ್ರೀಯ ಸಚಿವಾಲಯ ಸ್ಥಾಪನೆ. ಗೋ ಪ್ರಚಾರ ಮಂಡಳಿ ರಚನೆಯೊಂದಿಗೆ ಮೇವು ಭದ್ರತಾ ನೀತಿ ರೂಪಿಸುವುದು. ಗೋ ಆಧಾರಿತ ಕೃಷಿಯ ಖಚಿತತೆ. ಗೋವಿನಿಂದ ಪಂಚದ್ರವ್ಯ ಉತ್ಪನ್ನಗಳ ಉತ್ಪಾದನೆ ಮತ್ತು ಮಾರುಕಟ್ಟೆ ವ್ಯವಸ್ಥೆಯ ಹೆಚ್ಚಳ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net