ಕಾಪು ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಪ್ರಮುಖರಾದ ಮೋಹಿನಿ ಶೆಟ್ಟಿ, ನೀಲಕಂಠ ಮೇಸ್ತ, ಕಿರಣ್ ಆಳ್ವ ಮೊದಲಾದವರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೂಚನೆ
ಕಾಪು ಪುರಸಭೆ ವಿಶೇಷ ಸಾಮಾನ್ಯ ಸಭೆ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ಪುರಸಭೆ ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಸಕಲ ಮೂಲಸೌಕರ್ಯಗಳೊಂದಿಗೆ ಫುಡ್ಕೋರ್ಟ್ ನಿಮಾರ್ಣಕ್ಕೆ ಸೂಕ್ತ ಸರ್ಕಾರಿ ಜಮೀನು ಗುರುತಿಸುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
ಕಾಪು ಪುರಸಭೆ ವ್ಯಾಪ್ತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಪುರಸಭೆ ಇಂದಿರಾ ಗಾಂಧಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಇದರಿಂದ ಬೀದಿಬದಿ ವ್ಯಾಪಾರಕ್ಕೆ ಕಡಿವಾಣ ಹಾಕುವುದರೊಂದಿಗೆ ಪುರಸಭೆಗೂ ಆದಾಯ ಬರಲಿದೆ. ಕೌನ್ಸಿಲ್ ಈ ಬಗ್ಗೆ ಸೂಕ್ತ ರ್ನಿಣಯ ಕೈಗೊಳ್ಳುವಂತೆ ಶಾಸಕರು ತಿಳಿಸಿದರು.
ಡಿಸಿಗೆ ಮನವಿ:
ಪುರಸಭೆ ವ್ಯಾಪ್ತಿಯಲ್ಲಿ ವ್ಯವಸ್ಥಿತ ಪಾರ್ಕಿಂಗ್ಗಾಗಿ ಜಿಲ್ಲಾಧಿಕಾರಿ ಅಧಿಸೂಚನೆಗಾಗಿ ಕಾಯಲಾಗುತ್ತಿದೆ. ಅದಕ್ಕೆ ಬೇಕಾದ ಜಾಗದ ಗುರುತು ಸಹಿತ ಚೌಕಟ್ಟುಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಾಧಿಕಾರಿ ನೀಲಕಂಠ ಮೇಸ್ತ ತಿಳಿಸಿದರು.
ವಾಹನಗಳ ನಿಲುಗಡೆಗೆ ಸೂಕ್ತ ಜಾಗ:
ಕಾಪು ಪೇಟೆ, ಸರ್ವಿಸ್ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯಿಂದ ಸಮಸ್ಯೆಗಳಾಗುತ್ತಿವೆ. ದ್ವಿಚಕ್ರ ಸಹಿತ ಇತರ ವಾಹನಗಳ ನಿಲುಗಡೆಗೆ ಸೂಕ್ತ ಜಾಗ ಗುರುತಿಸಿ ವರದಿ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
ಸರ್ವೀಸ್ ರಸ್ತೆಗಳಲ್ಲಿ ಬಸ್ ಸಂಚಾರಕ್ಕೆ ಬ್ರೇಕ್:
ಪುರಸಭೆ ವ್ಯಾಪ್ತಿಯ ಹೆದ್ದಾರಿ ಆಸುಪಾಸಿನ ಸರ್ವೀಸ್ ರಸ್ತೆಗಳಲ್ಲಿ ಬಸ್ ಸಂಚಾರದಿಂದ ಅಪಘಾತಗಳಾಗಿ ಸಾವು ನೋವು ತಪ್ಪಿಸುವ ಸಲುವಾಗಿ ಬಸ್ಗಳು ಕೇವಲ ಹೆದ್ದಾರಿಯಲ್ಲಿಯೇ ಸಂಚರಿಸಲು ಕ್ರಮ ವಹಿಸುವಂತೆ ಸದಸ್ಯರು ಸಾರಿಗೆ ಹಾಗೂ ಪೊಲೀಸ್ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದರು.
ಸೂಕ್ತ ತಂಗುದಾಣ ಬೇಡಿಕೆ:
ಉಡುಪಿ ಕಡೆ ಸಂಚರಿಸುವ ವೇಗಧೂತ ಬಸ್ಗಳ ನಿಲುಗಡೆ ಸ್ಥಳದಲ್ಲಿ ಸೂಕ್ತ ತಂಗುದಾಣ ನಿರ್ಮಿಸಬೇಕು. ಕರ್ಕಶ ಹಾರ್ನ್ ವಿರುದ್ಧ ಕ್ರಮ ಕೈಗೊಳ್ಳಬೇಕು. ನಿಶಬ್ದ ವಲಯ ಎಂಬ ಫಲಕ ಅಳವಡಿಸುವಂತೆ ಸದಸ್ಯ ಅರುಣ್ ಶೆಟ್ಟಿ ಪಾದೂರು ಒತ್ತಾಯಿಸಿದರು.
ಕರ್ಕಶ ಹಾರ್ನ್ಗೆ ಕಡಿವಾಣ
ಹೆದ್ದಾರಿಯಲ್ಲಿ ಬಸ್ ನಿಲುಗಡೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಅಧಿಸೂಚನೆ ಬಳಿಕ ಕ್ರಮ ಕೈಗೊಳ್ಳುವುದಾಗಿ ಕಾಪು ಠಾಣಾಧಿಕಾರಿ ತೇಜಸ್ವಿ ತಿಳಿಸಿದರು. ಸಾರಿಗೆ ಇಲಾಖೆಯಿಂದ ತಪಾಸಣೆ ನಡೆಸಿ ಬಸ್ಗಳ ಕರ್ಕಶ ಹಾರ್ನ್ಗಳನ್ನು ತೆರವು ಮಾಡಿ ದಂಡ ಹಾಕಲಾಗುತ್ತಿದೆ. ಹಾರ್ನ್ಗೆ 3 ಸಾವಿರ ರೂ. ದಂಡವಿದ್ದರೂ ಬಸ್ಗಳು ಮತ್ತೆ ಹಾರ್ನ್ ಅಳವಡಿಸಿ ನಿಯಮ ಉಲ್ಲಂಸುತ್ತಿವೆ ಎಂದು ಮೋಟಾರು ವಾಹನ ನಿರೀಕ್ಷಕರು ಅಸಹಾಯಕತೆ ವ್ಯಕ್ತಪಡಿಸಿದರು. ಕಾಪು ಪ್ರದೇಶದಲ್ಲಿ ಕರ್ಕಶ ವಾರ್ನ್ ವಿರುದ್ಧ ಕ್ರಮ ವಹಿಸಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಸರ್ವೀಸ್ ರಸ್ತೆ ಪ್ರವೇಶ ಹಾಗೂ ನಿರ್ಗಮನ ಸ್ಥಳದಲ್ಲಿ ವೇಗ ತಡೆ ಅಳವಡಿಸಲು ಹೆದ್ದಾರಿ, ಪೊಲೀಸ್ ಹಾಗೂ ಸಾರಿಗೆ ಇಲಾಖೆ ಸಂಯುಕ್ತವಾಗಿ ಸೇರಿ ಕ್ರಮ ವಹಿಸಬೇಕು ಎಂದು ಶಾಸಕರು ತಿಳಿಸಿದರು.
ತಾಲೂಕು ಆಸ್ಪತ್ರೆಗೆ ಆದ್ಯತೆ
ಕಾಪು ತಾಲೂಕು ಕೇಂದ್ರದಲ್ಲಿಯೇ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ನಿಮಾರ್ಣಕ್ಕೆ ಕೌನ್ಸಿಲ್ ರ್ನಿಣಯ ಕೈಗೊಂಡಿತು. ಈಗಾಗಲೇ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ಕಳೆದ ವರ್ಷದ ಬಜೆಟ್ನಲ್ಲಿ ಸಮುದಾಯ ಆಸ್ಪತ್ರೆಯಾಗಿಸಿ ಘೋಷಣೆ ಮಾಡಿತ್ತು. ಇದೀಗ ಆರ್ಥಿಕ ಸಮಸ್ಯೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬ್ಲಾಕ್ ಆಸ್ಪತ್ರೆಯನ್ನಾಗಿಸಿ ಸರ್ಕಾರ ಆದೇಶ ಮಾಡಿದೆ ಎಂದು ಶಾಸಕರು ತಿಳಿಸಿದರು. ಹೆದ್ದಾರಿ ಬಳಿಯಲ್ಲಿಯೇ ಇರುವ ಕೇಂದ್ರವನ್ನು ಆದ್ಯತೆಯಲ್ಲಿ ತಾಲೂಕು ಆಸ್ಪತ್ರೆಯನ್ನಾಗಿಸಬೇಕಿದೆ. ಅದಕ್ಕಾಗಿ ಸರ್ಕಾರಕ್ಕೆ ಒತ್ತಡ ತರಲಾಗುವುದು ಎಂದರು.
ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ಕಿರಣ್ ಆಳ್ವ ಉಪಸ್ಥಿತರಿದ್ದರು.