ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿ ಉಡುಪಿಯ ಡಿಸಿ ಕಚೇರಿ ಬಳಿ ಕೊರಗ ಸಮುದಾಯದವರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಬೆಂಬಲಿಸಿದರು. ಸುಶೀಲಾ ನಾಡ, ಶೇಖರ್ ಕೆಂಜೂರು, ಕುಮಾರ ಕೆಂಜೂರು, ಪುತ್ರನ್ ಹೆಬ್ರಿ, ಪುನೀತ್ ಕಾರ್ಕಳ, ರೇಖಾ ಆತ್ರಾಡಿ ಇತರರಿದ್ದರು.
Published on:
Copied
Follow Us
* ಉಡುಪಿ ಶಾಸಕ ಯಶಪಾಲ್ ಸುವರ್ಣ ಭರವಸೆ
* ಸಮುದಾಯದವರ ಅಹೋರಾತ್ರಿ ಧರಣಿಗೆ ಬೆಂಬಲ
ಉಡುಪಿ:ಜಿಲ್ಲೆಯ ಮೂಲ ನಿವಾಸಿಗಳಾಗಿರುವ ಕೊರಗ ಸಮುದಾಯ ಅತ್ಯಂತ ಹಿಂದುಳಿದ ಸಮಾಜವಾಗಿದ್ದರೂ ಸಮಾಜದ ಮುಖ್ಯವಾಹಿನಿಗೆ ಬರುವ ಉದ್ದೇಶದಿಂದ ಕೊರಗ ಯುವ ಜನತೆ ಶಿಕ್ಷಣದ ಮೂಲಕ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸಮುದಾಯದ ಪ್ರತಿಭಾವಂತ ಯುವ ಜನತೆಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಲಾಖೆಯ ಸಚಿವರಿಗೆ ಪತ್ರ ಬರೆದು ಮನವಿ ಮಾಡುವುದಾಗಿ ಶಾಸಕ ಯಶ್ ಪಾಲ್ ಸುವರ್ಣ ಭರವಸೆ ನೀಡಿದರು.
ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗಾವಕಾಶ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮುಂಭಾಗದಲ್ಲಿ 6 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕೊರಗ ಸಮುದಾಯದವರ ಧರಣಿ ಸ್ಥಳಕ್ಕೆ ಶನಿವಾರ (ಡಿ.20) ಭೇಟಿ ನೀಡಿ, ಪ್ರತಿಭಟನೆಗೆ ಬೆಂಬಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಅಧ್ಯಕ್ಷೆ ಸುಶೀಲಾ ನಾಡ, ಮುಖಂಡರಾದ ಶೇಖರ್ ಕೆಂಜೂರು, ಕುಮಾರ ಕೆಂಜೂರು, ಪುತ್ರನ್ ಹೆಬ್ರಿ, ಪುನೀತ್ ಕಾರ್ಕಳ, ರೇಖಾ ಆತ್ರಾಡಿ, ತ್ರಿವೇಣಿ ಕಟಪಾಡಿ, ಪ್ರಜ್ಞಾ ಶಂಕರ್ ನಾರಾಯಣ, ಶೀನಾ ಬೆಳ್ಮಣ್ ಇತರರು ಉಪಸ್ಥಿತರಿದ್ದರು.