ಕೊಚ್ಚಿ ಹೋಯ್ತು ಹುಂತನಗೋಳಿ ರಸ್ತೆ

 ಆಲೂರಿನಿಂದ ಹುಂತನಗೋಳಿಗೆ ಸಂಪರ್ಕಿಸುವ ಮಣ್ಣಿನ ರಸ್ತೆ ಮಳೆಗೆ ರಾಡಿಯಾಗಿದೆ.
ಆಲೂರಿನಿಂದ ಹುಂತನಗೋಳಿಗೆ ಸಂಪರ್ಕಿಸುವ ಮಣ್ಣಿನ ರಸ್ತೆ ಮಳೆಗೆ ರಾಡಿಯಾಗಿದೆ.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಆಲೂರು- ಹುಂತನಗೋಳಿ ಸಂಪರ್ಕಿಸುವ ಮಣ್ಣಿನ ರಸ್ತೆ ಮಳೆಗೆ ರಾಡಿಯಾಗಿದ್ದು, ಒಂದು ಕಡೆ ಭಾರಿ ಪ್ರಮಾಣದ ಮಣ್ಣು ಕೊಚ್ಚಿ ಹೋಗಿದ್ದರಿಂದ ಸಂಪರ್ಕ ಕಡಿತಗೊಂಡಿದೆ. ಇದರಿಂದ ಆಲೂರು, ಹೇರೂರು, ಕಾಲ್ತೋಡು, ನಾವುಂದ ಗ್ರಾಮದ ಜನರಿಗೆ ಸಂಚಾರಕ್ಕೆ ಸಮಸ್ಯೆಯಾಗಿದೆ.
ಹುಂತನಗೋಳಿಯ ಈ ಹಿಂದೆ ಇದ್ದ ರಸ್ತೆ ಖಾಸಗಿ ಜಾಗದಲ್ಲಿದ್ದು, ಫೆಬ್ರವರಿಯಲ್ಲಿ ಸರ್ಕಾರಿ ಜಾಗದಲ್ಲಿ ರಸ್ತೆ ನಿರ್ಮಿಸಲಾಗಿದೆ. ಇಳಿಜಾರು ಭಾಗದಲ್ಲಿ ಜೇಡಿ ಮಣ್ಣು ಕೆಸರು ಗದ್ದೆಯಾಗಿದ್ದು, ಮೊದಲ ಮಳೆಗೆ ರಸ್ತೆ ಇಳಿಜಾರು ಭಾಗ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಪರಿಣಾಮ ಯಾವುದೇ ವಾಹನ ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ.
ಆಲೂರಿನಿಂದ ಹುಂತನಗೋಳಿಗೆ ಈ ರಸ್ತೆ ಮೂಲಕ ಕೇವಲ 3 ಕಿ.ಮೀ. ದೂರವಿದೆ. ಆದರೆ ಈ ಮಾರ್ಗ ಬಂದ್ ಆಗಿರುವುದರಿಂದ ಆಲೂರು ಕಡೆಗೆ ಬರಬೇಕಾದರೆ ಯರುಕೋಣೆ, ನಾವುಂದ ರಸ್ತೆ ಅಥವಾ ಹಾಲ್ಕಲ್ ಜಡ್ಕಲ್ ಮೂಲಕ ಅಥವಾ ಎದುರ್ ಬೈಲ್ ರಸ್ತೆಯ ಮೂಲಕ 15ರಿಂದ 25 ಕಿ.ಮೀ. ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ಸಮಸ್ಯೆಯಿಂದಾಗಿ ಜನರಿಗೆ ಆಲೂರಿಗೆ ಬರಲು ಸಾಧ್ಯವಿಲ್ಲದೆ ಇರುವುದರಿಂದ ಕಾಲ್ತೋಡು ಮೂಲಕ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳು, ಗ್ರಾಮಸ್ಥರು ಆಲೂರಿಗೆ ಬರಲು ಕಷ್ಟವಾಗುತ್ತಿದೆ.

ಗ್ರಾಮಸ್ಥರ ಆಗ್ರಹ


ಹುಂತನಗೋಳಿ ಭಾಗವನ್ನು ಸಂಪರ್ಕಿಸಲು ಇರುವ ಏಕೈಕ ರಸ್ತೆ ಇದಾಗಿದೆ. ಆದರೆ ಈಗ ಸಂಪರ್ಕ ಕಡಿತಗೊಂಡಿರುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಈಗಲಾದಲೂ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಶಾಸಕರು ತಕ್ಷಣ ಈ ಬಗ್ಗೆ ಗಮನಹರಿಸಿ ರಸ್ತೆಯನ್ನು ಸರಿಪಡಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಆಲೂರು- ಹುಂತನಗೋಳಿ ಸಂಪರ್ಕಕ್ಕೆ ಹೊಸ ರಸ್ತೆ ಮಾಡಲಾಗಿದೆ. ಆದರೆ ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲ. ನಾಲ್ಕು ಗ್ರಾಮಗಳ ಸಂಪರ್ಕ ರಸ್ತೆಯಾಗಿರುವುದರಿಂದ ಕಾಂಕ್ರೀಟ್ ರಸ್ತೆ ಅಥವಾ ಡಾಂಬರು ಕಾಮಗಾರಿ ಮಾಡಿಸಬೇಕಾದ ಅನಿವಾರ್ಯತೆ ಇರುವುದರಿಂದ ಜಿಲ್ಲಾಡಳಿತ, ತಾಲೂಕು ಆಡಳಿತ ಕೈಜೋಡಿಸುವುದು ಅನಿವಾರ್ಯ.

— ರಾಜೇಶ್ ದೇವಾಡಿಗ ಆಲೂರು ಗ್ರಾ.ಪಂ. ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net