

ಕುಂದಾಪುರ: ಮಕ್ಕಳ ಶಿಕ್ಷಣದಲ್ಲಿ ಅಂಕಗಳ ಜತೆ ಮಾನವೀಯ ಮೌಲ್ಯ ಕೂಡಿಸಿಕೊಂಡು ಮನುಷ್ಯತ್ವದಿಂದ ಬಾಳಲು ಬೇಕಾದ ಶಿಕ್ಷಣ ನೀಡಬೇಕು. ಕೇವಲ ಅಂಕ ಗಳಿಕೆ ಮಾತ್ರವಲ್ಲದೆ ವ್ಯವಹಾರಿಕ ಕೌಶಲ, ವ್ಯವಹಾರ ಜ್ಞಾನ ಬೆಳೆಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಸನ್ನದ್ಧರಾಗಬೇಕು ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಹೇಳಿದರು.
ಹೆಮ್ಮಾಡಿಯ ಜನತಾ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಗುರುವಾರ ಆಯೋಜಿಸಲಾಗಿದ್ದ ವ್ಯವಹಾರ ಮೇಳ ‘ಜನತಾ ಆವಿಷ್ಕಾರ್-2026’ ಉದ್ಘಾಟಿಸಿ ಮಾತನಾಡಿದರು.
ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ರಕ್ತದ ಆಪತ್ಬಾಂಧವ ಸತೀಶ್ ಸಾಲ್ಯಾನ್ ಮಣಿಪಾಲ, ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ ಗಿಳಿಯಾರ್, ಬೈಂದೂರು ತಾಲೂಕು ರೈತ ಸಂ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು.
ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರ್ತಿ ಚಿತ್ರಾ ಕಾರಂತ, ಜನತಾ ಪ್ರೌಢಶಾಲೆ ಮುಖ್ಯಶಿಕ್ಷಕ ಜಗದೀಶ ಶೆಟ್ಟಿ, ದೀಪಿಕಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ರಮೇಶ ಪೂಜಾರಿ ಸ್ವಾಗತಿಸಿದರು. ಉದಯ ನಾಯ್ಕ ನಿರೂಪಿಸಿದರು.
ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾಮೂಹಿಕ ನೃತ್ಯ ಸ್ಪರ್ಧೆ, ಚಿತ್ರ ಕಲಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ವಿಜ್ಞಾನ ಮೇಳ, ಕಿರು ಪ್ರಹಸನ ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು135ಕ್ಕೂ ಅಧಿಕ ಮಳಿಗೆಗಳನ್ನು ತೆರೆದು ವಿದ್ಯಾರ್ಥಿಗಳೇ ವ್ಯವಹಾರ ಮಾಡುವುದರ ಮೂಲಕ ಶೈಕ್ಷಣಿಕ ಸಂಚಲನ ಮೂಡಿಸಿದರು. ಪ್ರತಿಷ್ಠಿತ ಕಲಾತಂಡಗಳಿಂದ ಹೋಳಿ ಕುಣಿತ, ಹೌಂದೇರಾಯನ ವಾಲಗ, ಹುಲಿ ಹೆಜ್ಜೆ, ವಿವಿಧ ನೃತ್ಯ ತಂಡಗಳಿಂದ ನೃತ್ಯ ಪ್ರದರ್ಶನ, ಸತೀಶ್ ಹೆಮ್ಮಾಡಿ ತಂಡದಿಂದ ಜಾದೂ ವಿಸ್ಮಯ ನಡೆಯಿತು.