ಕಾಸರಗೋಡು: ಗೃಹಿಣಿಯ ಫೋಟೋವನ್ನು ಎಡಿಟ್ ಮಾಡಿ ಪತಿಯ ಫೇಸ್‌ಬುಕ್ ಖಾತೆ ಹಾಗೂ ಇನ್‌ಸ್ಟಾಗ್ರಾಂಗೆ ರವಾನಿಸಿ ಪತಿ ಹಾಗೂ ಮಗುವನ್ನು ಕೊಲ್ಲುವುದಾಗಿ ಫೋನ್ ಮೂಲಕ ಬೆದರಿಕೆಯೊಡ್ಡಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪಾವೂರು ನಿವಾಸಿ 37ರ ಹರೆಯದ ಮಹಿಳೆ ನೀಡಿದ ದೂರಿನನ್ವಯ ಕುಂಜತ್ತೂರು ನಿವಾಸಿ ಇಬ್ರಾಹಿಂ ಖಲೀಲ್(32) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಮೇ 29ರಂದು ಮಧ್ಯಾಹ್ನ 12ಕ್ಕೆ ಹಾಗೂ 30ರಂದು ಬೆಳಗ್ಗೆ 10.44ರ ಮಧ್ಯೆ ಪ್ರಕರಣ ನಡೆದಿದೆ.
ಇಬ್ರಾಹಿಂ ಖಲೀಲ್ ತನ್ನ ಫೋಟೋವನ್ನು ದೂರುದಾರೆ ಗೃಹಿಣಿಯ ಫೋಟೋದ ಜತೆಗೆ ಜೋಡಿಸಿ ಅವರ ಪತಿಗೆ ಕಳುಹಿಸಿಕೊಟ್ಟಿದ್ದು, ಸೋಷಿಯಲ್ ಮೀಡಿಯಾ ಮೂಲಕ ಕೆಟ್ಟ ರೀತಿಯಲ್ಲಿ ಪ್ರಚಾರಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.