ಕುಂದಾಪುರ: ಕರ್ಕುಂಜೆ ಗ್ರಾಮದ ನೇರಳಕಟ್ಟೆ ಸಮೀಪದ ಹಂದಕುಂದ ಎಂಬಲ್ಲಿ ಶನಿವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಸಹಿತ ಒಳಗಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ.
ಹಂದಕುಂದ ಅರೆಕಲ್ಲು ಮನೆಯ ಗಣಪು ಶೆಡ್ತಿ ಎಂಬುವರ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಪೂರ್ಣ ಹಾನಿಯಾಗಿದೆ. ಮನೆಯ ವಾಡು, ಗೋಡೆಗೂ ಹಾನಿಯಾಗಿದ್ದು, ಒಳಗಿದ್ದ ಸ್ವಲ್ಪ ಚಿನ್ನಾಭರಣ, ನಗದು, ಟಿವಿ, ಇನ್ನಿತರ ಇಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಬರೆ, ಪಾತ್ರೆಗಳೆಲ್ಲವೂ ಸುಟ್ಟು ಕರಕರಲಾಗಿದೆ.
ಗಣಪು ಶೆಡ್ತಿ ಹಾಗೂ ಅವರ ಮೊಮ್ಮಗ ವಾತ್ರ ಮನೆಯಲ್ಲಿದ್ದು, ಶನಿವಾರ ಪಕ್ಕದ ಮನೆಯೊಂದರಲ್ಲಿ ಭಜನಾ ಕಾರ್ಯಕ್ರಮ ಇದ್ದುದರಿಂದ ಬೀಗ ಹಾಕಿ ಅಲ್ಲಿಗೆ ತೆರಳಿದ್ದರು. ರಾತ್ರಿ 12ರ ನಂತರ ಬೆಂಕಿ ಕಾಣಿಸಿಕೊಂಡಿರಬಹುದು ಎನ್ನಲಾಗಿದ್ದು, 2 ಗಂಟೆ ಸುವಾರಿಗೆ ಮನೆ ಪಕ್ಕದ ದಾರಿಯಲ್ಲಿ ಹೋಗುತ್ತಿದ್ದವರೊಬ್ಬರು ನೋಡಿ ವಿಷಯ ತಿಳಿಸಿದ್ದಾರೆ. ಅಷ್ಟರೊಳಗೆ ಮನೆಯ ಬಹುತೇಕ ಭಾಗ ಸುಟ್ಟು ಹೋಗಿತ್ತು. ಬಳಿಕ ಕುಂದಾಪುರ ಅಗ್ನಿಶಾಮಕದಳ, ಸ್ಥಳೀಯರು ಸೇರಿ ಹತ್ತಿರದಲ್ಲಿದ್ದ ದನದ ಕೊಟ್ಟಿಗೆಗೆ ಬೆಂಕಿ ತಗಲುವುದನ್ನು ತಪ್ಪಿಸಿದ್ದಾರೆ.