ಕೊಲ್ಯದಲ್ಲಿ ಮನೆ ಕುಸಿತ

 ಆರ್ಯಾಪು ಗ್ರಾಮದ ಕೊಲ್ಯ ಎಂಬಲ್ಲಿ ಚಿತ್ರರೇಖಾ ಎಂಬುವರ ಮನೆ ಕುಸಿದು ಬಿದ್ದಿರುವುದು.
ಆರ್ಯಾಪು ಗ್ರಾಮದ ಕೊಲ್ಯ ಎಂಬಲ್ಲಿ ಚಿತ್ರರೇಖಾ ಎಂಬುವರ ಮನೆ ಕುಸಿದು ಬಿದ್ದಿರುವುದು.
Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ ಆರ್ಯಾಪು ಗ್ರಾಮದ ಸಂಪ್ಯ ಸಮೀಪದ ಕೊಲ್ಯ ಎಂಬಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಇನ್ನೊಂದು ಮನೆಯ ಬದಿಯ ತಡೆಗೋಡೆಗೆ ಹಾನಿಯಾಗಿದೆ.
ಆರ್ಯಾಪು ಗ್ರಾಮ ಪಂಚಾಯಿತಿಯ ನೀರು ಸರಬರಾಜು ಟ್ಯಾಂಕ್ ಇರುವ ಸ್ಥಳಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಚಿತ್ರರೇಖಾ ಎಂಬುವರಿಗೆ ಸೇರಿದ ಮನೆ ಭಾನುವಾರ ಬೆಳಗ್ಗೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಈ ಮನೆ ನಿವೇಶನ ಪೂವಪ್ಪ ನಾಯ್ಕ ಎಂಬುವರಿಗೆ ಸರ್ಕಾರದಿಂದ ಮಂಜೂರಾಗಿದ್ದು, ಅದನ್ನು ಚಿತ್ರರೇಖಾ ಪಡೆದುಕೊಂಡಿದ್ದರು. ಆದರೆ ಮನೆ ಅಪಾಯಕಾರಿಯಾಗಿದ್ದ ಹಿನ್ನೆಲೆಯಲ್ಲಿ ಚಿತ್ರರೇಖಾ ಕುಟುಂಬ ವಾಸ್ತವ್ಯವನ್ನು ಬಾಡಿಗೆ ಮನೆಯೊಂದಕ್ಕೆ ಸ್ಥಳಾಂತರಿಸಿತ್ತು ಎಂದು ತಿಳಿದು ಬಂದಿದೆ. ಇದರಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕೊಲ್ಯ ವಾಪ್ತಿಯಲ್ಲಿರುವ ನಾಗೇಶ್ ಎಂಬುವರ ಮನೆಯ ಬದಿಯಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಕುಸಿದು, ಮನೆಯ ಬದಿಗೆ ಬಿದ್ದಿದೆ. ಗುಡ್ಡದ ಮೇಲ್ಭಾಗದಿಂದ ಹರಿದು ಬಂದ ಮಳೆನೀರಿನಿಂದಾಗಿ ಮಣ್ಣು ಕುಸಿತಗೊಂಡು ರಸ್ತೆ ಬದಿಯ ತಡೆಗೋಡೆಯ ಕೆಂಪು ಕಲ್ಲುಗಳ ಸಮೇತ ಮನೆಯ ಬದಿಗೆ ಬಿದ್ದಿದೆ. ಈ ಎರಡು ಘಟನಾ ಸ್ಥಳಗಳಿಗೆ ಆರ್ಯಾಪು ಗ್ರಾಮ ಆಡಳಿತಾಧಿಕಾರಿ ಅಶ್ವಿನಿ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೊಲ್ಯ ವಾಪ್ತಿಯಲ್ಲಿ ಹಲವಾರು ಮಂದಿಗೆ ಅವೈಜ್ಞಾನಿವಾಗಿ ಮನೆ ನಿವೇಶನಗಳನ್ನು ನೀಡಲಾಗಿದ್ದು, ಇಲ್ಲಿನ ಅವೈಜ್ಞಾನಿಕ ವ್ಯವಸ್ಥೆಗಳಿಂದಾಗಿಯೇ ಮಳೆಗಾಲದಲ್ಲಿ ಸಮಸ್ಯೆ ಎದುರಾಗುತ್ತಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net