ಹೋಟೆಲ್​ಗಳಲ್ಲಿ 'ಕಟ್ಟಿಗೆ ಒಲೆ' ಅಡುಗೆ

ಉಡುಪಿಯ ಕಿದಿಯೂರು ಹೋಟೆಲ್​ನಲ್ಲಿ ಕಟ್ಟಿಗೆ ಒಲೆ ಮೂಲಕ ಅಡುಗೆ ಮಾಡುತ್ತಿರುವುದು.
ಉಡುಪಿಯ ಕಿದಿಯೂರು ಹೋಟೆಲ್​ನಲ್ಲಿ ಕಟ್ಟಿಗೆ ಒಲೆ ಮೂಲಕ ಅಡುಗೆ ಮಾಡುತ್ತಿರುವುದು.
Published on

* ಗ್ರಾಹಕರಿಗೆ ನಿತ್ಯ ಅಗತ್ಯ ಆಹಾರಗಳ ವ್ಯವಸ್ಥೆ

* ಮುಂದುವರಿದ ವಾಣಿಜ್ಯ ಸಿಲಿಂಡರ್​ ಅವ್ಯವಸ್ಥೆ

ಪ್ರಶಾಂತ ಭಾಗ್ವತ ಉಡುಪಿ
ವಾಣಿಜ್ಯ ಗ್ಯಾಸ್​ ಸಿಲಿಂಡರ್​ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹೋಟೆಲ್​ ಉದ್ಯಮಕ್ಕೆ ತೀವ್ರ ಹಿನ್ನಡೆಯಾಗಿದ್ದು, ಶೇ.60ಕ್ಕೂ ಹೆಚ್ಚು ಪ್ರಮಾಣದಲ್ಲಿ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಹೋಟೆಲ್​ಗಳು ಉಡುಪಿ ಜಿಲ್ಲೆಯಲ್ಲಿ ಗುರುವಾರ ಬಂದ್​ ಆಗಿವೆ. 
ಕಮರ್ಷಿಯಲ್​ ಗ್ಯಾಸ್​ ಅಲಭ್ಯತೆಯಿಂದಾಗಿ ಉಡುಪಿಯ ಪ್ರಮುಖ ಹೋಟೆಲ್​ಗಳ ಮಾಲೀಕರು ಕೈಕಟ್ಟಿ ಕುಳಿತುಕೊಳ್ಳದೆ ಕಟ್ಟಿಗೆ ಒಲೆ ಹಾಗೂ ಅಸ್ತ್ರ ಒಲೆಯಲ್ಲಿ ಅಡುಗೆ ಮಾಡಿಸುತ್ತಿದ್ದು, ಗ್ರಾಹಕರಿಗೆ ಅಗತ್ಯ ಆಹಾರ ಒದಗಿಸುತ್ತಿದ್ದಾರೆ.

ಇಡ್ಲಿ, ಅನ್ನ-ಸಾಂಬಾರ್​ ವ್ಯವಸ್ಥೆ

ಉದ್ಯೋಗಿಗಳಿಗೆ, ಕಾರ್ಮಿಕರಿಗೆ, ಪ್ರಮುಖವಾಗಿ ಉಡುಪಿಗೆ ಆಗಮಿಸುವ ಪ್ರವಾಸಿಗರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲವು ಪ್ರಮುಖ ಹೋಟೆಲ್​ಗಳು ತುರ್ತು ಆಹಾರ ತಯಾರಿಸುತ್ತಿವೆ. ಉಡುಪಿ ನಗರದಲ್ಲಿರುವ ಖ್ಯಾತ ಕಿದಿಯೂರು ಹೋಟೆಲ್​ನಲ್ಲಿ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ಮೂಲಕ ಗ್ರಾಹಕರ ಹೊಟ್ಟೆ ತುಂಬಿಸಲಾಗುತ್ತಿದೆ. ಬೆಳಗ್ಗಿನ ತಿಂಡಿಗೆ ಒಮ್ಮೆ ಸಿದ್ಧಪಡಿಸಿ ಇಡಬಹುದಾದ ಇಡ್ಲಿ, ಉಪ್ಪಿಟ್ಟು, ಬನ್ಸ್​ ಹಾಗೂ ಮಧ್ಯಾಹ್ನದ ಊಟಕ್ಕೆ ಅನ್ನ-ಸಾಂಬಾರ್​, ಕರ್ಡ್​ ರೈಸ್​ ವ್ಯವಸ್ಥೆ ಮಾಡುತ್ತಿದೆ. ಬೆಂಕಿ ಬಳಸಿ ಪದೇಪದೇ ಸಿದ್ಧಪಡಿಸಿಕೊಡುವ ಆಹಾರ, ವಿವಿಧ ದೋಸೆ ವೆರೈಟಿ ಹಾಗೂ ನಾರ್ತ್​ಸೌತ್​ನ ಮೆನುಗಳಿಗೆ ಕೊಕ್​ ಹಾಕಲಾಗಿದೆ.

ಸಣ್ಣ ಹೋಟೆಲ್​ನವರು ಕಂಗಾಲು

ನಗರದಲ್ಲಿ ಲಭ್ಯವಿರುವ ಸಣ್ಣ ಮಳಿಗೆಗಳಲ್ಲಿ ಬಾಡಿಗೆ ಪಡೆದು ಹೋಟೆಲ್​ ನಡೆಸುತ್ತಿರುವವರು ಗ್ಯಾಸ್​ ಅಲಭ್ಯತೆಯಿಂದ ಕಂಗಾಲಾಗಿದ್ದಾರೆ. ಅವರ ಹೋಟೆಲ್​ಗಳಲ್ಲಿ ಸ್ಥಳದ ಅಭಾವವಿದ್ದು ಕಟ್ಟಿಗೆ ಒಲೆ ಉರಿಸಲು ಸಾಧ್ಯವಿಲ್ಲ. ಕರೆಂಟ್​ ಒಲೆ ಮೂಲಕ ಟೀ ಮಾಡಿಕೊಂಡಿದ್ದು, ಸಣ್ಣ-ಪುಟ್ಟ ಸ್ನ್ಯಾಕ್ಸ್​ ಸಿದ್ಧಮಾಡಿಕೊಂಡಿದ್ದಾರೆ. ಆದರೆ, ನಿತ್ಯದಂತೆ ಬೆಳಗ್ಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆ ಮಾಡಲು ಸಾಧ್ಯವಾಗದೆ ಕೈಹಿಸುಕಿಕೊಳ್ಳುತ್ತಿದ್ದಾರೆ.
ಉಡುಪಿಯ ಲಾಡ್ಜ್​ಗೆ ಬರುವ ಯಾತ್ರಿಕರು, ಪ್ರವಾಸಿಗರು 'ತಮ್ಮಲ್ಲಿ ಊಟ-ತಿಂಡಿಯ ವ್ಯವಸ್ಥೆ ಇದೆಯೇ' ಎಂದು ವಿಚಾರಿಸಿ ಬುಕ್​ ಮಾಡುತ್ತಿದ್ದಾರೆ. ತಕ್ಕಮಟ್ಟಿಗೆ ಮಾಂಸಾಹಾರವೂ ಲಭಿಸುತ್ತಿದ್ದು 'ಮೆನು'ನಲ್ಲಿರುವ ಆಹಾರ ಸದ್ಯಕ್ಕೆ ಸಿಗದಾಗಿದೆ.

ಕಮರ್ಷಿಯಲ್​ ಗ್ಯಾಸ್​ ಶೇ.10 ಪೂರೈಕೆ

ಉಡುಪಿ ಹಾಗೂ ಮಂಗಳೂರು ಜಿಲ್ಲೆಯಲ್ಲಿ ಗ್ಯಾಸ್​ ಏಜೆನ್ಸಿ ಹೊಂದಿರುವವರಿಗೆ ಮಂಗಳೂರಿನ ಎಚ್​ಪಿಸಿಎಲ್​ ಸಂಸ್ಥೆಯವರು ಕಮರ್ಷಿಯಲ್​ ಗ್ಯಾಸ್​ ಸಿಲಿಂಡರ್​ನ ಬಿಲ್ಲಿಂಗ್​ ಸ್ಥಗಿತಗೊಳಿಸದೆ. ಆದರೂ, ಈಗಾಗಲೇ ಸಂಬಂಧಿತ ಏಜೆಂಟರಿಂದ ತರಿಸಿಕೊಂಡ ವರದಿ ಆಧಾರದ ಹಿನ್ನೆಲೆಯಲ್ಲಿ ಶೇ.5-10ರಷ್ಟು ಕಮರ್ಷಿಯಲ್​ ಗ್ಯಾಸ್​ ಪೂರೈಕೆ ಮಾಡುತ್ತಿದೆ. ಅವುಗಳನ್ನು ಆಸ್ಪತ್ರೆ, ಹಾಸ್ಟೆಲ್​ ಹಾಗೂ ಶಾಲೆಗಳಿಗೆ ರೇಶನಿಂಗ್​ ಪದ್ಧತಿಯಲ್ಲಿ ನೀಡಲಾಗುತ್ತಿದೆ. ಸಿಲಿಂಡರ್​ ಕೊರತೆ ವದಂತಿ ಹಿನ್ನೆಲೆಯಲ್ಲಿ ಗ್ರಹ ಬಳಕೆಯ ಗ್ಯಾಸ್​ ಬುಕ್ಕಿಂಗ್​ ಹೆಚ್ಚು ಪ್ರಮಾಣದಲ್ಲಿ ಆಗುತ್ತಿದೆ. ಹೀಗಾಗಿ ಡೊಮೆಸ್ಟಿಕ್​ ಗ್ರಾಹಕರಿಗೆ ಬುಕ್ಕಿಂಗ್​ ಆಗಿರುವ ಒಟಿಪಿ ಬಂದಿದ್ದರೂ ಸಹ ಕನಿಷ್ಠ 3 ದಿನದಿಂದ ವಾರದೊಳಗೆ ಸಿಲಿಂಡರ್​ ಪೂರೈಕೆ ಮಾಡಲಾಗುತ್ತಿದೆ ಎನ್ನುತ್ತಾರೆ. ಉಡುಪಿಯ ಎಚ್​ಪಿ ಗ್ಯಾಸ್​ನ ಪಾಲುದಾರರಾದ ರಾಘವೇಂದ್ರ ಆಚಾರ್ಯ ಗ್ಯಾಸ್​ನ ಬಾಲಾಜಿ ವಿಷ್ಣು ಆಚಾರ್ಯ.
"

ವಾಣಿಜ್ಯ ಸಿಲಿಂಡರ್​ ಅಲಭ್ಯತೆಯಿಂದ ನಮ್ಮ ಹೋಟೆಲ್​ನಲ್ಲಿ ಕಟ್ಟಿಗೆ ಒಲೆ ಮೂಲಕ ಸೀಮಿತ ಅಡುಗೆ ಮಾಡಲಾಗುತ್ತಿದೆ. ಕಟ್ಟಿಗೆಯೂ ಸರಿಯಾಗಿ ಸಿಗುತ್ತಿಲ್ಲ, ದರವೂ ದುಪ್ಪಟ್ಟಾಗಿದೆ. ನಷ್ಟದ ನಡುವೆಯೂ ಗ್ರಾಹಕರಿಗೆ ಆಹಾರದ ಕೊರತೆ ಆಗದಿರಲೆಂದು ಊಟ&ತಿಂಡಿ ವ್ಯವಸ್ಥೆ ಮಾಡುತ್ತಿದ್ದೇವೆ. ಎಲ್​ಪಿಜಿ ಸಮಸ್ಯೆಯನ್ನು ಕೇಂದ್ರ-ರಾಜ್ಯ ಸರ್ಕಾರ ಶೀಘ್ರ ಶಮನ ಮಾಡಿ ಹೋಟೆಲ್​ ಉದ್ಯಮಕ್ಕೆ ಸಹಕರಿಸಬೇಕು.


"

ಅರಬ್​ ರಾಷ್ಟ್ರಗಳಲ್ಲಿ ಯುದ್ಧದ ಪರಿಣಾಮದಿಂದಾಗಿ ಭಾರತವು ಇಂಧನ ಮತ್ತು ತೈಲ ಸಮಸ್ಯೆ ಎದುರಿಸುವಂತಾಗಿದೆ. ನಮ್ಮ ಹೋಟೆಲ್​ನಲ್ಲಿ ಅಸ್ತ್ರ ಒಲೆಯ ಮೂಲಕ ಸೀಮಿತ ಪ್ರಮಾಣದಲ್ಲಿ ಊಟ-ತಿಂಡಿ ಸಿದ್ಧಪಡಿಸುತ್ತಿದ್ದೇವೆ. ಹಾರ್ಮುಜ್​ ಜಲಸಂಧಿ ಮಾರ್ಗದಲ್ಲಿ ತೈಲ ಟ್ಯಾಂಕರ್​ಗಳ ಸಾಗಾಟಕ್ಕೆ ತಡೆ ಹೇರಿದ್ದ ಇರಾನ್, ಇದೀಗ ಭಾರತದ ಹಡಗುಗಳಿಗೆ ಅನುಮತಿ ನೀಡಿದೆ. ಹೀಗಾಗಿ ಕೆಲ ದಿನಗಳಲ್ಲಿ ಕಮರ್ಷಿಯಲ್​ ಸಿಲಿಂಡರ್​ನ ಸಮಸ್ಯೆ ನಿವಾರಣೆ ಆಗಲಿದೆ ಎಂದು ಭಾವಿಸಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net