ಪುರಾಣೇತಿಹಾಸಗಳ ಜ್ಞಾನ ನೀಡುವ ಸಮೃದ್ಧ ಕಲೆ ಯಕ್ಷಗಾನ

ಉಡುಪಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್​ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ 'ಯಕ್ಷಧ್ರುವ ಕಲಾ ಗೌರವಾರ್ಪಣೆ' ಸಲ್ಲಿಸಲಾಯಿತು. ಡಾ ಜಿ.ಶಂಕರ್​, ಡಾ. ಎಚ್​.ಎಸ್​. ಬಲ್ಲಾಳ್​, ಸತೀಶ್​ ಶೆಟ್ಟಿ ಪಟ್ಲ, ಬಿ. ಜಯಕರ್​ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಮನೋಹರ್​ ಶೆಟ್ಟಿ, ದಿವಾಕರ್​ ಶೆಟ್ಟಿ, ಎಂ.ಎಲ್​. ಸಾಮಗ, ನಿರೂಪಮಾ ಪ್ರಸಾದ್​ ಶೆಟ್ಟಿ, ಕೃಷ್ಣಪ್ರಸಾದ್​ ಅಡ್ಯಂತಾಯ ಇತರರಿದ್ದರು.
ಉಡುಪಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್​ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ 'ಯಕ್ಷಧ್ರುವ ಕಲಾ ಗೌರವಾರ್ಪಣೆ' ಸಲ್ಲಿಸಲಾಯಿತು. ಡಾ ಜಿ.ಶಂಕರ್​, ಡಾ. ಎಚ್​.ಎಸ್​. ಬಲ್ಲಾಳ್​, ಸತೀಶ್​ ಶೆಟ್ಟಿ ಪಟ್ಲ, ಬಿ. ಜಯಕರ್​ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಮನೋಹರ್​ ಶೆಟ್ಟಿ, ದಿವಾಕರ್​ ಶೆಟ್ಟಿ, ಎಂ.ಎಲ್​. ಸಾಮಗ, ನಿರೂಪಮಾ ಪ್ರಸಾದ್​ ಶೆಟ್ಟಿ, ಕೃಷ್ಣಪ್ರಸಾದ್​ ಅಡ್ಯಂತಾಯ ಇತರರಿದ್ದರು.
Published on

ಹೋಟೆಲ್​ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅನಿಸಿಕೆ 

ಉಡುಪಿಯಲ್ಲಿ 'ಯಕ್ಷಧ್ರುವ ಕಲಾ ಗೌರವಾರ್ಪಣೆ' ಸ್ವೀಕಾರ

ಉಡುಪಿ: ಸಂಗೀತ, ನೃತ್ಯ, ಅಭಿನಯ, ವೇಷ&ಭೂಷಣ ಮತ್ತು ಸಾಹಿತ್ಯದ ಸಮನ್ವಯದಿಂದ ಕೂಡಿರುವ ಯಕ್ಷಗಾನವು ನಮ್ಮ ಹೆಮ್ಮೆಯ ಸಾಂಸ್ಕೃತಿಕ ಪರಂಪರೆಯಾಗಿದೆ. ಇಂತಹ ಸರ್ವಾಂಗಸುಂದರ ಮತ್ತು ಸಮೃದ್ಧ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಕಲಾವಿದರಿಗೆ ಅಗತ್ಯವಾದ ಪ್ರೋತ್ಸಾಹ,  ಗೌರವ ಮತ್ತು ಆರ್ಥಿಕ ಭದ್ರತೆ ಒದಗಿಸಬೇಕು. ಜನರಿಗೆ ಪುರಾಣೇತಿಹಾಸ ಮತ್ತು ಸಂಸ್ಕೃತಿಯ ಕಥೆಗಳನ್ನು ಮನಮುಟ್ಟುವಂತೆ ತಲುಪಿಸುವ ಅಪೂರ್ವ ಕಲೆ ಯಕ್ಷಗಾನವಾಗಿದೆ ಎಂದು ಹೈದರಾಬಾದ್​ನ ಹೋಟೆಲ್​ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಪುರಭವನದಲ್ಲಿ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್​ನ ಉಡುಪಿ ಘಟಕ ಹಾಗೂ ಮಹಿಳಾ ವಿಭಾಗದ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ದಶಮ ಸಂಭ್ರಮದ ನಿಮಿತ್ತ ಶನಿವಾರ (ಜೂ.27) ಸಂಜೆ ಆಯೋಜಿಸಿದ್ದ ದ್ವೀತಿಯ ವರ್ಷದ ತೆಂಕುತಿಟ್ಟಿನ 'ಸಮುದ್ರ ಮಥನ' ಯಕ್ಷಗಾನ ಕಾರ್ಯಕ್ರಮದಲ್ಲಿ 'ಯಕ್ಷಧ್ರುವ ಕಲಾ ಗೌರವಾರ್ಪಣೆ' ಸ್ವೀಕರಿಸಿ ಮಾತನಾಡಿದರು.

ಕಲಾವಿದರಿಗೆ ಅಗತ್ಯ ನೆರವು

ಟ್ರಸ್ಟ್​ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್​ ಶೆಟ್ಟಿ ಮಾತನಾಡಿ, ಯಕ್ಷಗಾನ ಉಳಿಯಬೇಕಾದರೆ ಕಲಾವಿದರು ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಬೇಕು. ಪ್ರೇಕ್ಷಕರೂ ಸಹ ಕಲೆಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಬೇಸಿಗೆಯಲ್ಲಿ ಕಲಾವಿದರಿಗೆ ಮೇಳಗಳಲ್ಲಿ ಉದ್ಯೋಗ, ವೇತನ ದೊರೆಯುತ್ತದೆ. ಆದರೆ, ಮಳೆಗಾಲದಲ್ಲಿ ಅನೇಕರು ಜೀವನ ನಿರ್ವಹಣೆಗೆ ಕೂಲಿ ಸೇರಿದಂತೆ ವಿವಿಧ ಕೆಲಸ ಮಾಡುವ ಅನಿವಾರ್ಯತೆ ಎದುರಿಸುತ್ತಾರೆ. ಅವರ ಈ ಸಂಕಷ್ಟ ಮನಗಂಡು ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಫೌಂಡೇಷನ್​ ಸ್ಥಾಪಿಸಿ, ಅಗತ್ಯ ನೆರವು ಮತ್ತು ಸಹಕಾರ ನೀಡಲಾಗುತ್ತಿದೆ ಎಂದರು.
ಜಿ. ಶಂಕರ್​ ಫ್ಯಾಮಿಲಿ ಟ್ರಸ್ಟ್​ನ ಪ್ರವರ್ತಕ ಡಾ. ಜಿ. ಶಂಕರ್​ ಮಾತನಾಡಿ, ಶುಭ ಹಾರೈಸಿದರು. ಗೌರವಾಧ್ಯಕ್ಷರಾದ ಪುರುಷೋತ್ತಮ ಪಿ. ಶೆಟ್ಟಿ, ಮನೋಹರ್​ ಎಸ್​. ಶೆಟ್ಟಿ, ಕೊಡವೂರು ತೋಟದಮನೆ ದಿವಾಕರ್​ ಶೆಟ್ಟಿ, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್​. ಸಾಮಗ, ಮಹಿಳಾ ಘಟಕದ ಅಧ್ಯಕ್ಷೆ ನಿರೂಪಮಾ ಪ್ರಸಾದ್​ ಶೆಟ್ಟಿ, ಕೃಷ್ಣಪ್ರಸಾದ್​ ಅಡ್ಯಂತಾಯ ಉಪಸ್ಥಿತರಿದ್ದರು.
ಅಧ್ಯಕ್ಷ ಬಿ. ಜಯಕರ್​ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ವಿದ್ವಾನ್​ ದಾಮೋದರ್​ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.

ಡಾ. ಜಿ.ಶಂಕರ್​ಗೆ 'ಅಮೂಲ್ಯ ರತ್ನ' ಪ್ರಶಸ್ತಿ

ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಾಡೋಜ ಡಾ ಜಿ.ಶಂಕರ್​ ಅವರಿಗೆ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್​ ಟ್ರಸ್ಟ್​ ವತಿಯಿಂದ 'ಅಮೂಲ್ಯ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ಕಲಾವಿದ ಇಂದ್ರಾಳಿ ಪ್ರಭಾಕರ್​ ಆಚಾರ್ಯ ಅವರಿಗೆ ಟ್ರಸ್ಟ್​ ವತಿಯಿಂದ 25 ಸಾವಿರ ರೂ. ಧನಸಹಾಯ ಹಸ್ತಾಂತರಿಸಲಾಯಿತು.
"

ಮಣಿಪಾಲ ಆರೋಗ್ಯ ಕಾರ್ಡ್​ ಆರಂಭಗೊಂಡು ಸುವರ್ಣ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಫೌಂಡೇಷನ್​ನ ಮನವಿಯಂತೆ ಯಕ್ಷಗಾನ ಕಲಾವಿದರು ಮತ್ತು ಅವರ ಕುಟುಂಬದವರಿಗೆ ಈವರೆಗೆ 2,750 ಕಾರ್ಡ್​ ಉಚಿತವಾಗಿ ವಿತರಿಸಲಾಗಿದೆ. ಕಲಾವಿದರ ಆರೋಗ್ಯ ಕಾಳಜಿಗೆ ಇದು ನಮ್ಮ ಬದ್ಧತೆಯಾಗಿದೆ. ಮುಂದೆಯೂ ಸಹಕಾರ ನೀಡಲಾಗುವುದು.

— ಡಾ. ಎಚ್​.ಎಸ್​. ಬಲ್ಲಾಳ್​. ಮಾಹೆ ವಿ.ವಿ. ಸಹಕುಲಾಧಿಪತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net