

ನರಸಿಂಹ ನಾಯಕ್ ಬೈಂದೂರು
ಬೈಂದೂರು ತಾಲೂಕು ಕೇಂದ್ರವಾಗಿ ಎಂಟು ವರ್ಷ ಕಳೆದರೂ ತಾಲೂಕು ಆಸ್ಪತ್ರೆ ಭಾಗ್ಯ ಸಿಕ್ಕಿರಲಿಲ್ಲ. ತಾಲೂಕಿನ ಬಹು ಬೇಡಿಕೆಯ 100 ಹಾಸಿಗೆಗಳ ಸಾಮರ್ಥ್ಯದ ತಾಲೂಕು ಆಸ್ಪತ್ರೆ ಬೇಡಿಕೆಗೆ ಸ್ಪಂದಿಸಿ, ಪ್ರಸ್ತುತ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಮಂಜೂರಾತಿಗೆ ಸರ್ಕಾರ ಆದೇಶ ನೀಡಿದೆ.
ಆಸ್ಪತ್ರೆಗೆ ಬೇಕಾಗಿದ್ದ 2.11 ಎಕರೆ ಸರ್ಕಾರಿ ಜಾಗವನ್ನು ಇಲಾಖೆ ಹೆಸರಿಗೆ ಮಂಜೂರು ಮಾಡಿಸಿಕೊಂಡ ನಂತರ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬೈಂದೂರು ತಾಲೂಕು ಕೇಂದ್ರಕ್ಕೆ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ಮಂಜೂರು ವಾಡಲು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಶಾಸಕ ಗುರುರಾಜ ಗಂಟಿಹೊಳೆ ಮನವಿ ಮಾಡಿದ್ದರು. ಅಲ್ಲದೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ಮುನ್ನವೂ ಮನವಿ ಸಲ್ಲಿಸಿದ್ದರು.
ಪ್ರಸ್ತುತ ಬೈಂದೂರು ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆಗಳ ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಇಲಾಖೆ ಆದೇಶ ಮಾಡಿದೆ. ಮುಂದಿನ ದಿನಗಳಲ್ಲಿ ಅಗತ್ಯ ಸಿಬ್ಬಂದಿ ನೇಮಕಾತಿಯೊಂದಿಗೆ ತಾಲೂಕು ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ 100 ಹಾಸಿಗೆಗಳಿಗೆ ಉನ್ನತೀಕರಿಸಲು ಶಾಸಕರು ಮನವಿ ವಾಡಿದ್ದಾರೆ.
ಬೈಂದೂರಿನಲ್ಲಿ ತಾಲೂಕು ಆಸ್ಪತ್ರೆ ಇಲ್ಲದಿದ್ದರೂ ಸಮುದಾಯ ಆರೋಗ್ಯ ಕೇಂದ್ರದಲ್ಲೇ ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದೆ. ಆರೋಗ್ಯ ಕೇಂದ್ರದಲ್ಲಿ ಸೀರೋಗ ತಜ್ಞರು, ಮಕ್ಕಳ ತಜ್ಞರು, ದಂತ ವೈದ್ಯರು, ಆಯುಷ್ ಹಾಗೂ ಸಾಂಕ್ರಾಮಿಕ ರೋಗ ತಜ್ಞರು ಇದ್ದಾರೆ. ಅರಿವಳಿಕೆ ಹಾಗೂ ಹಿರಿಯ ವೈದ್ಯಾಧಿಕಾರಿಗಳ ಕೊರತೆ ಇದೆ. ಎರಡು ಆಂಬುಲೆನ್ಸ್ ಇದೆ. ಒಟ್ಟು 48 ಸಿಬ್ಬಂದಿ ಇರಬೇಕಿದ್ದು, 19 ಸಿಬ್ಬಂದಿ ಇದ್ದಾರೆ. ಪ್ರತಿದಿನ 200ರಿಂದ 250 ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಾರೆ.