ಕೊರಗ ನಿವಾಸಿಗಳಿಗೆ ಗೃಹಭಾಗ್ಯ

ಕೋಟತಟ್ಟುವಿನ ಚಿಟ್ಟಿಬೆಟ್ಟು ಕೊರಗ ಕಾಲನಿಯಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಆರ್‌ಸಿಸಿ ಮನೆಗಳು
ಕೋಟತಟ್ಟುವಿನ ಚಿಟ್ಟಿಬೆಟ್ಟು ಕೊರಗ ಕಾಲನಿಯಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಆರ್‌ಸಿಸಿ ಮನೆಗಳು
Published on
ರವೀಂದ್ರ ಕುಮಾರ್ ಕೋಟ
ಸ್ವಂತ ಸೂರು ಸಹಿತ ಮೂಲ ಸೌಲಭ್ಯಗಳಿಲ್ಲದೆ ಅಸಾಹಯಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಕೋಟತಟ್ಟು ಪಂಚಾಯಿತಿ ವ್ಯಾಪ್ತಿಯ ಮೂಲನಿವಾಸಿಗಳಾದ ಎಂಟು ಕೊರಗ ಕುಟುಂಬಗಳ ಸ್ವಂತ ಸೂರಿನ ಕನಸು ಇನ್ನೆರಡು ದಿನದಲ್ಲಿ ನನಸಾಗಲಿದೆ. ಕೋಟತಟ್ಟು ಗ್ರಾಮ ಪಂಚಾಯಿತಿ ಕೊರಗ ನಿವಾಸಿಗಳಿಗೆ ಗೃಹಭಾಗ್ಯ ಕರುಣಿಸಿದ್ದು, ಫೆ.14ಕ್ಕೆ 8 ಮನೆಗಳನ್ನು ಕೊರಗ ಸಮುದಾಯಕ್ಕೆ ಅರ್ಪಿಸಲಿದೆ.
ಸಾಮಾಜಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದಿರುವ ಕೊರಗ ಸಮುದಾಯದ ಸಮಸ್ಯೆಗಳನ್ನು ಆಲಿಸುವವರೇ ಇಲ್ಲದಂತಹ ಕಾಲಘಟ್ಟದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಹುಟ್ಟೂರು ಕೋಟತಟ್ಟುವಿನ ಚಿಟ್ಟಿಬೆಟ್ಟು ಕೊರಗ ಕಾಲನಿ ನಿವಾಸಿಗಳಿಗೆ ಸೂರು ನಿರ್ಮಿಸಿಕೊಡುವ ಮಹಾತ್ಕಾರ್ಯ ಸಾಕಾರವಾಗುತ್ತಿದೆ.
ಯಾವುದೇ ಮೂಲ ಸೌಲಭ್ಯಗಳಿಲ್ಲದೆ ಗುಡಿಸಲಿನಂಥ ಮನೆಯಲ್ಲಿ ಎಂಟು ಕೊರಗ ಕುಟುಂಬಗಳು ಕಷ್ಟಕರವಾದ ಜೀವನ ಸಾಗಿಸುತ್ತಿದ್ದರು. ಇದನ್ನರಿತ ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಪಿಡಿಒ ರವೀಂದ್ರ ರಾವ್, ಪಂಚಾಯಿತಿ ಸದಸ್ಯರ ತಂಡ ಹಗಲುರಾತ್ರಿ ಎನ್ನದೆ ಶ್ರಮಿಸಿ ಸುಂದರ ಸುಸಜ್ಜಿತ ಕಾಲನಿ ನಿರ್ಮಿಸಿದ್ದಾರೆ.

ದೇಣಿಗೆ ನೀಡಿದ ದಾನಿಗಳು

ಕೊರಗ ಕಾಲನಿಯ ಎಂಟು ಕುಟುಂಬಗಳಿಗೆ ಸೂರು ಕಲ್ಪಿಸುವ ಯೋಜನೆಗೆ 2024ರ ಮಾರ್ಚ್ 24ರಂದು ಆಗಿನ ವಿಪಕ್ಷ ನಾಯಕ, ಹಾಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಮ್ಮುಖದಲ್ಲಿ ಉದ್ಯಮಿ ಆನಂದ್ ಸಿ.ಕುಂದರ್ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. ಐಟಿಡಿಪಿ ಇಲಾಖೆಯ ವಸತಿ ಯೋಜನೆಯಡಿ ಅನುದಾನ ಬಳಸಿಕೊಂಡು ಮನೆ ನಿರ್ಮಾಣಕ್ಕೆ ಪಂಚಾಯಿತಿ ಮುಂದಾದರೂ ಆರ್ಥಿಕ ಕ್ರೋಡೀಕರಣ ಬಹುದೊಡ್ಡ ತಲೆನೋವಾಗಿ ಪರಿಣಮಿಸಿತು. ಇದನ್ನು ಮನಗಂಡ ಪಂಚಾಯಿತಿ ತಂಡ ದಾನಿಗಳ ಸಹಕಾರ ಪಡೆಯಲು ಮುಂದಾಯಿತು. ಒಂದೊಂದು ಮನೆ ನಿರ್ಮಾಣಕ್ಕೆ ತಲಾ 12 ಲಕ್ಷ ರೂ. ಅಂದಾಜು ವೆಚ್ಚದೊಂದಿಗೆ ಎಂಟು ಮನೆಗಳಿಗೆ 1 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಒಗ್ಗೂಡಿಸಲು ಮುಂದಾಯಿತು. ಗ್ರಾಪಂನ ಸಾಮಾಜಿಕ ಕಳಕಳಿಗೆ ದಾನಿಗಳೂ ಕೈಜೋಡಿಸಿದರು. ಇವರೆಲ್ಲರ ಪ್ರಯತ್ನ ಫಲಿಸಿದ್ದು ಸುಂದರ ಕಾರಗ ಕಾಲನಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಿದೆ.

ಕೋಟಿ ರೂ. ವೆಚ್ಚದಲ್ಲಿ ತಲೆಎತ್ತಿವೆ 8 ಮನೆಗಳು

ಇಲ್ಲಿನ ನಿವಾಸಿಗಳಾದ ಲಕ್ಷ್ಮೀ, ಶೃಂಗೇರಿ, ಗುಲಾಬಿ, ಸುಗಂಧಿ, ಸುಂದರಿ, ಸೋನಿ, ರವಿ, ಮಹಾಬಲ ಅವರು ಹಲವು ವರ್ಷಗಳಿಂದ ಗುಡಿಸಲಿನಂತಹ ಮನೆಯಲ್ಲಿ ವಾಸವಿದ್ದು ಮೂಲಸೌಕರ್ಯದಿಂದ ವಂಚಿತರಾಗಿದ್ದರು. ಕೋಟತಟ್ಟು ಗ್ರಾಪಂ ಈ ಕುಟುಂಬಗಳಿಗೆ ಆರ್‌ಸಿಸಿ ಮನೆ ನಿರ್ಮಿಸಿ ಕೊಡುವ ಯೋಜನೆ ಹಾಕಿಕೊಂಡಿತು. ಐಟಿಡಿಪಿ ಇಲಾಖೆಯಿಂದ ಒಂದೊಂದು ಮನೆಗೆ 3.75 ಲಕ್ಷ ರೂ. ಅನುದಾನದ ಜತೆಗೆ ದಾನಿಗಳಿಂದ ಹಣ ಸಂಗ್ರಹಿಸಿ ತಲಾ 12 ಲಕ್ಷ ರೂ.ನಂತೆ 1 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಎಂಟು ಆರ್‌ಸಿಸಿ ಮನೆಗಳು ನಿರ್ಮಾಣಗೊಂಡಿದ್ದು ಫೆ.14ರಂದು ಪೇಜಾವರ ಶ್ರೀಗಳು ಲೋಕಾರ್ಪಣೆಗೊಳಿಸಲಿದ್ದಾರೆ.

ರಾಜ್ಯದಲ್ಲಿ ಸದ್ದು ಮಾಡಿದ್ದ ಕಾಲನಿ

ಚಿಟ್ಟಿಬೆಟ್ಟು ಕೊರಗ ಕಾಲನಿಯ ಯುವಕ ರಾಜೇಶ್ ಎಂಬಾತನ ಮೆಹಂದಿ ಕಾರ್ಯಕ್ರಮ 2021ರಲ್ಲಿ ನಡೆದಿತ್ತು. ಆವತ್ತು ಕೊರಗ ಕಾಲನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಮೆಹಂದಿ ಏರ್ಪಡಿಸಿ ಡಿಜೆ ಅಳವಡಿಸಿ ಇಡೀ ಸಮುದಾಯ ಸಂತೋಷದಲ್ಲಿತ್ತು. ಸ್ಥಳೀಯರೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸ್ ಇಲಾಖೆ ಕಾಲನಿಗೆ ದಾಳಿ ಮಾಡಿ ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿದ್ದು ರಾಜ್ಯಾದ್ಯಾಂತ ಸುದ್ದಿಯಾಗಿತ್ತು, ಅಂದಿನ ಗೃಹಸಚಿವ ಆರಗ ಜ್ಞಾನೇಂದ್ರ ಸಹಿತ ಹಲವು ರಾಜಕಾರಣಿಗಳು ಭೇಟಿ ನೀಡಿ ಧೈರ್ಯ ತುಂಬಿದ್ದರು.

ಪಂಚಾಯಿತಿಯ ಮಾದರಿ ಕಾರ್ಯನಿರ್ವಹಣೆ

ಕೊರಗ ಸಮುದಾಯಕ್ಕೆ ಸೂರು ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್ ನೇತೃತ್ವದ ತಂಡದ ಒಗ್ಗಟ್ಟಿನ ಕಾರ್ಯನಿರ್ವಹಣೆ ರಾಜ್ಯಕ್ಕೆ ಮಾದರಿ ಎನಿಸಿದೆ. ಒಂದು ದೊಡ್ಡ ಯೋಜನೆಗೆ ಕಾಯಕಲ್ಪ ನೀಡಬೇಕಾದರೆ ಅಲ್ಲಿರುವ ಪ್ರತಿನಿಧಿಗಳ ಪಾತ್ರವು ಮಹತ್ವವಾದದ್ದು. ಈ ದಿಸೆಯಲ್ಲಿ ಅಧ್ಯಕ್ಷರಿಗೆ ಹೆಗಲು ನೀಡಿದ ಪ್ರತಿನಿಧಿಗಳು, ಪಿಡಿಒ, ಕಾರ್ಯದರ್ಶಿಗಳ ಸಹಕಾರ ಪ್ರಶಂಸನೀಯವಾದುದು.
"

ಕೋಟತಟ್ಟುವಿನ ಚಿಟ್ಟಿಬೆಟ್ಟು ಕೊರಗ ಕಾಲನಿಯಲ್ಲಿ ದಶಕಗಳ ಕಾಲದಿಂದ ಸೌಲಭ್ಯ ವಂಚಿತರಾಗಿ ಜೀವನ ಸಾಗಿಸುತ್ತಿದ್ದ ಕುಟುಂಬಗಳಿಗೆ ಸೂರು ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಕಿರಣ್ ಕೊಡ್ಗಿ, ಉದ್ಯಮಿ ಆನಂದ್ ಸಿ.ಕುಂದರ್ ಸಹಿತ ಉದ್ಯಮಿಗಳ ಸಹಕಾರದಿಂದ ಅನುಷ್ಠಾನಗೊಳಿಸಲಾಗಿದೆ. ಕೊರಗರನ್ನು ಮುಖ್ಯವಾಹಿನಿಗೆ ತರಲು ಪಂಚಾಯಿತಿ ಮುಂದೆಯೂ ಶ್ರಮಿಸಲಿದೆ.

ನಮ್ಮ ಸಮುದಾಯ ಸವಲತ್ತುಗಳಿಂದ ವಂಚತವಾಗಿದೆ. ಕೋಟತಟ್ಟು ಗ್ರಾಮ ಪಂಚಾಯಿತಿ ನಮ್ಮ ಇಡೀ ಸಮುದಾಯಕ್ಕೆ ಆಶ್ರಯದಾತರಾಗಿ ಸುಸಜ್ಜಿತ ಸೂರಿನ ಭಾಗ್ಯ ಕರುಣಿಸಿದೆ. ಪಂಚಾಯಿತಿ ಹಾಗೂ ಸಂಸದ ಕೋಟ, ಶಾಸಕ ಕೊಡ್ಗಿ ಸಹಿತ ಆರ್ಥಿಕ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net