ಐತಿಹಾಸಿಕ ಸ್ಮಾರಕ ಮೂಲೆಗುಂಪು!

 ಮೂಲೆಗುಂಪಾಗಿರುವ ಗಂಗೊಳ್ಳಿ ಲೈಟ್ ಹೌಸ್.
ಮೂಲೆಗುಂಪಾಗಿರುವ ಗಂಗೊಳ್ಳಿ ಲೈಟ್ ಹೌಸ್.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಬ್ರಿಟಿಷ್ ಕಾಲದ ಗಂಗೊಳ್ಳಿ ಗ್ರಾಮದ ಕೋಟೆಗುಡ್ಡೆ ಮಡಿ ಸಮುದ್ರ ತೀರದಲ್ಲಿರುವ ಲೈಟ್ ಹೌಸ್(ದೀಪಸ್ತಂಭ) ಪಾಳು ಬಿದ್ದಿದೆ. ಸುತ್ತಲೂ ಗಿಡಗಂಟಿ, ಪೊದೆಗಳು ಬೆಳೆದು ನಿಂತಿವೆ. ಕಸ ಕಡ್ಡಿ, ಮದ್ಯದ ಬಾಟಲಿಗಳು ತುಂಬಿ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಗೊಂಡಿದೆ.
ದಶಕಗಳ ಹಿಂದೆ ಮೀನುಗಾರರು, ನಾವಿಕರು, ಸಮುದ್ರ ಯಾನಿಗಳಿಗೆ ದಿಕ್ಸೂಚಿಯಾಗಿದ್ದ ವ್ಯವಸ್ಥೆ ಇಂದು ನಿಸ್ತೇಜವಾಗಿದೆ. ಆಕರ್ಷಕ ಕಟ್ಟಡ ಕಳೆಗುಂದಿದೆ. ಕಟ್ಟಡದ ಬಾಗಿಲು, ಕಿಟಕಿಗಳು ದುರ್ಬಲಗೊಂಡಿವೆ. ಸ್ತಂಭದ ತುದಿಯಲ್ಲಿರುವ ಬ್ರಿಟಿಷ್ ಕಾಲಘಟ್ಟದ ದೀಪ ಬೆಳಗದೆ ದಶಕವೇ ಸಂದು ಹೋಗಿದೆ.
ಗೋಲ್ ಗುಂಬಜ್ ಹೋಲುವ ದೀಪಸ್ತಂಭ ಕಟ್ಟಡ ಬ್ರಿಟಿಷರ ಕಾಲದ್ದು. ಕಟ್ಟಡ ಗಟ್ಟಿಮುಟ್ಟಾಗಿಯೇ ಇದ್ದರು ಆಕರ್ಷಣೆ ಕಳೆದುಕೊಂಡಿದೆ. ಸುಣ್ಣಬಣ್ಣ ಕಾಣದೆ ವರ್ಷಗಳೇ ಸಂದುಹೋಗಿದೆ. ದೀಪಸ್ತಂಭ ತುತ್ತ ತುದಿಗೆ ಏರುವ ಕಬ್ಬಿಣದ ಮೆಟ್ಟಲಿಗೆ ತುಕ್ಕು ಹಿಡಿದಿದ್ದು ತಳಭಾಗ ಬಿದ್ದು ಹೋಗಿದೆ. ಸೊತ್ತುಗಳಿಗೆ ಗೆದ್ದಲು ಹಿಡಿದಿದ್ದು, ದಶಕದಿಂದ ನನೆಗುದಿಗೆ ಬಿದ್ದಿರುವ ಲೈಟ್ ಹೌಸ್‌ನ ಕಡೆಗೆ ಕಣ್ಣೆತ್ತಿಯೂ ನೋಡದ ಸಂಬಂಧಿತ ಇಲಾಖೆಯ ನಿರ್ಲಕ್ಷೃದ ಬಗ್ಗೆ ಸ್ಥಳೀಯರು ಆಸಮಾಧಾನ ಹೊರಹಾಕಿದ್ದಾರೆ.
ತಮಿಳುನಾಡಿನ ಮಹಾಬಲಿಪುರ ಶಿವ ದೇವಸ್ಥಾನದ ಮೇಲೆ ಕಾಂಚಿಯ ಪಲ್ಲವ ಅರಸರಿಂದ ರಚಿಸಲ್ಪಟ್ಟ ಬೆಂಕಿ ಉರಿಸುವ ದೀಪಸ್ತಂಭ ಪ್ರಾಚೀನ ಲೈಟ್ ಹೌಸ್ ಆಗಿದೆ. ಕಾಪು, ಪಣಂಬೂರು, ಬಾವುಟಗುಡ್ಡ, ಕುಂದಾಪುರದ ಕೋಡಿ ಲೈಟ್ ಹೌಸ್ ಪ್ರಸಿದ್ಧಿ ಪಡೆದಿವೆ. ಈ ಸಾಲಿಗೆ ಗಂಗೊಳ್ಳಿ ಲೈಟ್ ಹೌಸ್ ಸೇರುತ್ತದೆ. ಆದರೆ ನಿರ್ಲಕ್ಷೃದಿಂದ ಐತಿಹಾಸಿಕ ಸ್ಮಾರಕ ಮೂಲೆಗುಂಪಾಗಿದೆ ಎನ್ನುತ್ತಾರೆ ಇತಿಹಾಸ ಸಂಶೋಧಕ ಪ್ರದೀಪ್ ಕುಮಾರ್ ಬಸ್ರೂರು.

ಲೈಟ್ ಹೌಸ್ ಕಟ್ಟಡ 2006ರಿಂದ ಅಭದ್ರತೆಯಿಂದ ನಲುಗಿದೆ. ಲೈಟ್ ಹೌಸ್‌ಗೆ ಸಂಬಂಧಿಸಿದಂತೆ 4.33 ಎಕರೆ ಜಾಗವಿದೆ. ಕಾರ್ಯಚಟುವಟಿಕೆ ನಿಲ್ಲಿಸಿದ್ದು, ಇದರ ಸೌಂದರ್ಯ ಮಸುಕಾಗಿದೆ. ಕೋಡಿಯಲ್ಲಿ ದೀಪಸ್ತಂಭ ರಚನೆ ಬಳಿಕ ಇದು ಮಹತ್ವ ಕಳೆದುಕೊಂಡಿದೆ. ಗತವೈಭವ ಮತ್ತೆ ಮರುಕಳಿಸುವ ಪ್ರಯತ್ನ ಸಂಬಂಧಿತ ಇಲಾಖೆಯಿಂದ ನಡೆಯಬೇಕು.

— ಚಂದ್ರ ಖಾರ್ವಿ ಲೈಟ್‌ಹೌಸ್, ಗಂಗೊಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net