ಪೊಳಲಿ ದ್ವಾರದ ಬಳಿ ಗುಡ್ಡ ಕುಸಿತ

ಗುರುಪುರಕ್ಕೆ ಹತ್ತಿರದ ಪೊಳಲಿ ದ್ವಾರದಿಂದ ಅನತಿ ದೂರದಲ್ಲಿ ಕಡಿದಾದ ತಿರುವಿನಲ್ಲಿ ಭೂಕುಸಿತ ಸಂಭವಿಸಿದೆ.
ಗುರುಪುರಕ್ಕೆ ಹತ್ತಿರದ ಪೊಳಲಿ ದ್ವಾರದಿಂದ ಅನತಿ ದೂರದಲ್ಲಿ ಕಡಿದಾದ ತಿರುವಿನಲ್ಲಿ ಭೂಕುಸಿತ ಸಂಭವಿಸಿದೆ.
Published on

ಗುರುಪುರ: ಬಜ್ಪೆ-ಬಿ.ಸಿ.ರೋಡ್ ರಾಜ್ಯ ಹೆದ್ದಾರಿಯ ಗುರುಪುರಕ್ಕೆ ಹತ್ತಿರದ ಪೊಳಲಿ ದ್ವಾರದಿಂದ ಅನತಿ ದೂರದಲ್ಲಿ ಕಡಿದಾದ ತಿರುವಿನಲ್ಲಿ ಮಂಗಳವಾರ ಬೆಳಗ್ಗೆ ಭಾರಿ ಪ್ರಮಾಣದಲ್ಲಿ ಗುಡ್ಡದ ಮಣ್ಣು ಹಾಗೂ ಬಂಡೆಕಲ್ಲು ಕುಸಿದು ಬಿದ್ದಿದ್ದು, ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಈ ಮಾರ್ಗದ ಎಲ್ಲ ಬಸ್ ಸಂಚಾರ ರದ್ದುಗೊಳಿಸಲಾಗಿತ್ತು.

ರಸ್ತೆಗೆ ಹೊಂದಿಕೊಂಡಿರುವ ಎತ್ತರದ ಗುಡ್ಡದಿಂದ ಮಣ್ಣು ಮತ್ತು ಮುರ ಬಂಡೆಕಲ್ಲು ಕುಸಿದಿದೆ. ಮೇಲ್ಭಾಗದಲ್ಲಿ ಸಡಿಲ ಮಣ್ಣಿನಲ್ಲಿದ್ದ ಕೆಲವು ಬೃಹತ್ ಮರಗಳು ರಸ್ತೆಗೆ ಕುಸಿಯುವ ಹಂತ ತಲುಪಿವೆ. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸೆಕ್ಷನ್ ಅಧಿಕಾರಿ ದೇವಿಪ್ರಸಾದ್ ನೇತೃತ್ವದ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳಿಗೆ ಅಪಾಯ ತಂದೊಡ್ಡಬಹುದಾಗಿದ್ದ ಕೆಲವು ಮರ ಕಡಿದು ಹಾಕಿದ್ದಾರೆ. ಈ ವೇಳೆ ಸುತ್ತಲಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಂಡಿತ್ತು.
ದ್ವಾರದ ಬಳಿ ಬಜ್ಪೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದರು. ಮಧ್ಯಾಹ್ನದ ಹೊತ್ತಿಗೆ ರಾಜ್ಯ ಹೆದ್ದಾರಿಯಲ್ಲಿ ಬಸ್ ಸಂಚಾರ ಪುನರಾರಂಭಗೊಂಡಿದೆ. ಈ ಘಟನೆ ಬೆಳಗ್ಗಿನ ಹೊತ್ತು ಸಂಭವಿಸಿದ್ದರಿಂದ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರಿಗೆ ತೊಂದರೆ ಉಂಟಾಯಿತು. ಗುರುಪುರ ಕೈಕಂಬ ಹಾಗೂ ಪೊಳಲಿಗೆ ಬಸ್ ಸೇವೆ ಸೀಮಿತಗೊಳಿಸಲಾಗಿತ್ತು. ಮರ, ಮಣ್ಣು ತೆರವಿನ ಬಳಿಕ ವಾಹನ ಸಂಚಾರ ಸುಗಮಗೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net