ಹಳ್ಳಿ ಮಕ್ಕಳಿಗೆ ಹೈಟೆಕ್ ಶಿಕ್ಷಣ!

 ಬಗ್ವಾಡಿ ಸರ್ಕಾರಿ ಶಾಲೆ ಹೊರನೋಟ.
ಬಗ್ವಾಡಿ ಸರ್ಕಾರಿ ಶಾಲೆ ಹೊರನೋಟ.
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಉತ್ತಮ ಶಿಕ್ಷಣಕ್ಕೆ ಖಾಸಗಿ ಶಾಲೆಗಳನ್ನೇ ಆಶ್ರಯಿಸಬೇಕು ಎಂಬ ಕಲ್ಪನೆ ಜನರಲ್ಲಿದೆ. ಆದರೆ ಕುಂದಾಪುರ ತಾಲೂಕಿನ ಬೈಂದೂರು ವಲಯದ ನೂಜಾಡಿ ಗ್ರಾಮದ ಬಗ್ವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ನಂಬಿಕೆಯನ್ನು ಸುಳ್ಳಾಗಿಸಿದೆ.
ಶತಮಾನೋತ್ಸವ ಆಚರಿಸಿಕೊಂಡಿರುವ ಈ ಶಾಲೆ ಇಂದು ಆಧುನಿಕ ಸೌಲಭ್ಯಗಳು, ಗುಣಮಟ್ಟದ ಬೋಧನೆ, ತಂತ್ರಜ್ಞಾನ ಆಧಾರಿತ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಖಾಸಗಿ ಶಾಲೆಗಳಿಗೆ ಸವಾಲೊಡ್ಡುವ ಮಟ್ಟಕ್ಕೆ ಬೆಳೆದಿದೆ. ಕಳೆದ ಐದು ವರ್ಷಗಳಲ್ಲಿ ದಾಖಲಾತಿ ನಿರಂತರವಾಗಿ ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ.
1925ರಲ್ಲಿ ಸ್ಥಳೀಯರ ಕನಸಿನ ಕೂಸಾಗಿ ಕೇವಲ ಎರಡು ಕೊಠಡಿಗಳಲ್ಲಿ ಖಾಸಗಿ ಜಾಗದಲ್ಲಿ ಆರಂಭವಾದ ಈ ಶಾಲೆ ಇಂದು ಸ್ವಂತ ಜಾಗದಲ್ಲಿ 12 ಸುಸಜ್ಜಿತ ಕೊಠಡಿಗಳು, ಶತಮಾನೋತ್ಸವ ಭವನ, ಕಂಪ್ಯೂಟರ್ ಶಿಕ್ಷಣ, ಶುದ್ಧ ಕುಡಿಯುವ ನೀರಿನ ಘಟಕ, ಸುಸಜ್ಜಿತ ಅಡುಗೆಮನೆ, ವಿಶಾಲ ಆವರಣ ಹಾಗೂ ಸ್ವಚ್ಛ ಶೌಚಗೃಹ ಹೊಂದಿರುವ ಮಾದರಿ ಸರ್ಕಾರಿ ಶಾಲೆಯಾಗಿ ರೂಪುಗೊಂಡಿದೆ.

ನಗರ ಮಟ್ಟದ ಶಿಕ್ಷಣ

ಶಾಲೆಯಲ್ಲಿ 4 ಕಾಯಂ, 2 ಅತಿಥಿ, 3 ಗೌರವ ಸೇವೆ ಸೇರಿ ಒಟ್ಟು 9 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಎಲ್‌ಕೆಜಿಯಿಂದ 7ನೇ ತರಗತಿಯವರೆಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಕಟ್‌ಬೆಲ್ತೂರು, ಬಾಳಿಕೆರೆ, ನೂಜಾಡಿ, ಬಗ್ವಾಡಿ ಹಾಗೂ ದೇವಲ್ಕುಂದ ಭಾಗದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವಾಹನ ಸೌಲಭ್ಯ ಕಲ್ಪಿಸಲಾಗಿದೆ.

ಆಧುನಿಕ ಕೌಶಲ ಕಲಿಕೆ

ಪಠ್ಯ ವಿಷಯಗಳಲ್ಲದೆ ಪಠ್ಯೇತರ ವಿಷಯಗಳಿಗೂ ಒತ್ತು ನೀಡಲಾಗುತ್ತಿದ್ದು, ವಾರಕ್ಕೊಮ್ಮೆ ಕುಂದಾಪುರದಿಂದ ನುರಿತ ತರಬೇತುದಾರರು ಆಗಮಿಸಿ ಕರಾಟೆ ಹಾಗೂ ಅಬಾಕಸ್ ತರಬೇತಿ ನೀಡುತ್ತಾರೆ. ಕರಾಟೆ ಕಲಿತ ವಿದ್ಯಾರ್ಥಿಗಳು ತಾಲೂಕು ಹಾಗೂ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ್ದಾರೆ. ಕಂಪ್ಯೂಟರ್ ಶಿಕ್ಷಣದ ಮೂಲಕ ಮಕ್ಕಳಲ್ಲಿ ಡಿಜಿಟಲ್ ಜ್ಞಾನ ಬೆಳೆಸಲಾಗುತ್ತಿದ್ದು, ಸ್ಪರ್ಧಾತ್ಮಕ ಜಗತ್ತಿಗೆ ಅಗತ್ಯವಾದ ಕೌಶಲಗಳನ್ನು ಬಾಲ್ಯದಲ್ಲಿಯೇ ಕಲಿಸಲಾಗುತ್ತಿದೆ.

ಹಲವರ ಸಹಕಾರ

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೇ ವಿದ್ಯಾರ್ಥಿಗಳು, ಶಿಕ್ಷಕರು, ಜನಪ್ರತಿನಿಧಿಗಳು, ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಬಗ್ವಾಡಿ ಮೆತ್ತಿನಮನೆ ವೆಂಕಮ್ಮ ರಾಮಣ್ಣ ಶೆಟ್ಟಿ ಟ್ರಸ್ಟ್ ನಿರಂತರ ಸಹಕಾರ ನೀಡುತ್ತಿವೆ. ಈ ಸಹಭಾಗಿತ್ವ ಶಾಲೆಯನ್ನು ಮಾದರಿ ಶಿಕ್ಷಣ ಕೇಂದ್ರವನ್ನಾಗಿ ರೂಪಿಸಿದೆ. ಈ ಶಾಲೆಯಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಹುದ್ದೆಗಳಲ್ಲಿದ್ದಾರೆ. ಹಲವರು ಸರ್ಕಾರಿ ಇಲಾಖೆಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.

ಗುಣಮಟ್ಟ ಹೆಚ್ಚಿಸುವ ಸಂಕಲ್ಪ

2022ರಲ್ಲಿ ಕೇವಲ 72 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ 2023ರಲ್ಲಿ 85, 2024ರಲ್ಲಿ 95, 2025ರಲ್ಲಿ 110 ಹಾಗೂ 2026ರಲ್ಲಿ 117 ವಿದ್ಯಾರ್ಥಿಗಳು ಇದ್ದಾರೆ. 2013ರಲ್ಲಿ ಮುಖ್ಯಶಿಕ್ಷಕಿಯಾಗಿ ಶೈಲಜಾ ಶೆಟ್ಟಿ ಬಂದಾಗ ಕೇವಲ 38 ವಿದ್ಯಾರ್ಥಿಗಳಿದ್ದರು. ಶಾಲೆಯ ಗುಣಮಟ್ಟ ಹೆಚ್ಚಿಸುವ ಸಂಕಲ್ಪದೊಂದಿಗೆ ಶಿಕ್ಷಕರು, ಎಸ್‌ಡಿಎಂಸಿ, ಹಳೇ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರನ್ನು ಒಗ್ಗೂಡಿಸಿ ನಿರಂತರ ಪ್ರಯತ್ನ ನಡೆಸಿದ ಪರಿಣಾಮ ಇಂದು ದಾಖಲಾತಿ 117ಕ್ಕೆ ಏರಿದೆ.
"

ಗ್ರಾಮೀಣ ಮಕ್ಕಳಿಗೆ ಹೈಟೆಕ್ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಹಳೇ ವಿದ್ಯಾರ್ಥಿಗಳು, ದಾನಿಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಶಾಲೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತಮ ಕಲಿಕಾ ವಾತಾವರಣದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತಿದೆ.

— ಶೈಲಜಾ ಶೆಟ್ಟಿ ಮುಖ್ಯಶಿಕ್ಷಕಿ, ಬಗ್ವಾಡಿ ಶಾಲೆ

ಸರ್ಕಾರಿ ಶಾಲೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆ ದೂರವಾಗಬೇಕು ಎಂಬ ಉದ್ದೇಶ ಇಟ್ಟುಕೊಂಡು ದಾನಿಗಳು, ಗ್ರಾಮಸ್ಥರು ಹಾಗೂ ಹಳೇ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಗೆ ಬಹುವೆಚ್ಚದಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯ ನೀಡಲಾಗಿದೆ. ಈ ಶಾಲೆಯಿಂದ ಇನ್ನಷ್ಟು ಮಕ್ಕಳು ಉನ್ನತ ಸಾಧನೆ ಮಾಡಲಿ ಎಂಬುದು ನಮ್ಮ ಆಶಯ.

— ಪ್ರಕಾಶ ಆಚಾರ್ಯ ಅಧ್ಯಕ್ಷ, ಹಳೇ ವಿದ್ಯಾರ್ಥಿಗಳ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net