ಪಾರಂಪರಿಕ ಕಟ್ಟಡ ಮೂತ್ರದೊಡ್ಡಿ

102 ವರ್ಷ ಪೂರೈಸಿರುವ ಉಪನೋಂದಣಿ ಕಚೇರಿಯ ಹಳೇ ಕಟ್ಟಡ.
102 ವರ್ಷ ಪೂರೈಸಿರುವ ಉಪನೋಂದಣಿ ಕಚೇರಿಯ ಹಳೇ ಕಟ್ಟಡ.
Published on
ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಿ.ಸಿ.ರೋಡ್ ನಗರ ಕೇಂದ್ರ ಭಾಗದಲ್ಲಿರುವ ಬಂಟ್ವಾಳ ಉಪನೋಂದಣಿ ಕಚೇರಿಯ ಹಳೆಯ ಕಟ್ಟಡ ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ. ಜೆಎಂಎಫ್‌ಸಿ ನ್ಯಾಯಾಲಯ, ಬಂಟ್ವಾಳ ಪೊಲೀಸ್ ಉಪವಿಭಾಗಾಧಿಕಾರಿ ಕಚೇರಿ, ನಗರ ಪೊಲೀಸ್ ಠಾಣೆ, ತಾಲೂಕು ಆಡಳಿತ ಸೌಧದ ಪಕ್ಕದಲ್ಲಿರುವ ಈ ಕಟ್ಟಡ ಪಾಳುಕೊಂಪೆಯಾಗಿ ಮಾರ್ಪಟ್ಟಿದೆ. ಕಟ್ಟಡದ ಆವರಣದೊಳಗೆ ಮರಗಳು ಬೆಳೆದು, ಕಸ ತ್ಯಾಜ್ಯಗಳು ತುಂಬಿಕೊಂಡು ಸಾರ್ವಜನಿಕರಿಗೆ ಮಲ-ಮೂತ್ರ ವಿಸರ್ಜನೆಯ ಬಯಲು ಶೌಚಗೃಹವಾಗಿ ಪರಿವರ್ತನೆಗೊಂಡಿದೆ!.
ಬಿ.ಸಿ.ರೋಡಿನ ಉಪನೋಂದಣಿ ಕಚೇರಿಯ ಹಳೇ ಕಟ್ಟಡ ಶತಮಾನ ಪೂರೈಸಿದ್ದು ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿತ್ತು ಎನ್ನುವ ಹೆಗ್ಗಳಿಕೆ ಪಡೆದಿದೆ. ಇದೇ ಕಾರಣಕ್ಕೆ ಈ ಕಟ್ಟಡದ ಗೋಡೆಗಳು, ಹೆಂಚಿನ ಛಾವಣಿ ಇನ್ನೂ ಗಟ್ಟಿಮುಟ್ಟಾಗಿದೆ. ಹಿಂದೆ ಸಬ್ ರಿಜಿಸ್ಟ್ರಾರ್ ಕಚೇರಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಪ್ರತಿದಿನ ಅನೇಕ ಮಂದಿ ಇಲ್ಲಿಗೆ ಜಮೀನು ನೋಂದಣಿ, ವಿವಾಹ ನೋಂದಣಿ ಮೊದಲಾದ ಕೆಲಸಗಳಿಗೆ ಆಗಮಿಸುತ್ತಿದ್ದರು.
ಸಾರ್ವಜನಿಕರ ಭೇಟಿಯಿಂದಾಗಿ ಈ ಕಚೇರಿಗೊಂದು ವಿಶೇಷ ಕಳೆ ಇತ್ತು. ಉಪನೋಂದಣಿ ಕಚೇರಿ ಇಲ್ಲಿಂದ ಪಕ್ಕದ ತಾಲೂಕು ಆಡಳಿತ ಸೌಧಕ್ಕೆ ಸ್ಥಳಾಂತರಗೊಂಡ ಬಳಿಕ ಈ ಕಟ್ಟಡ ನೇಪಥ್ಯಕ್ಕೆ ಸರಿದಿದೆ. ನಗರಕ್ಕೆ ಬರುವ ಕೆಲ ಜನರು ಈ ಸ್ಥಳವನ್ನು ಮೂತ್ರದೊಡ್ಡಿಯನ್ನಾಗಿ ಪರಿವರ್ತಿಸಿದ್ದಾರೆ. ಇದರಿಂದಾಗಿ ಪರಿಸರವಿಡೀ ದುರ್ನಾತ ಬೀರುತ್ತಿದ್ದು ಇಡೀ ನಗರಕ್ಕೆ ಸಾಂಕ್ರಾಮಿಕ ರೋಗ ಹರಡುವಷ್ಟು ಸೊಳ್ಳೆಗಳು ಇಲ್ಲಿ ತುಂಬಿಕೊಂಡಿವೆ.

ಕಾಡಿನ ವಾತಾವರಣ

ಸಬ್ ರಿಜಿಸ್ಟ್ರಾರ್ ಕಚೇರಿ ಹಳೇ ಕಟ್ಟಡ ನಗರ ಕೇಂದ್ರ ಭಾಗದಲ್ಲಿ ಜನಸಂಚಾರ ಇರುವ ಪ್ರದೇಶದಲ್ಲೇ ಇದ್ದರೂ ಕಾಡಿನಂತಿದೆ. ಕಟ್ಟಡದ ಬದಿಯಲ್ಲಿ ದೊಡ್ಡ-ದೊಡ್ಡ ಕಾಡು ಮರಗಳು ಬೆಳೆದಿದ್ದು ಜೀರುಂಡೆಯ ಸದ್ದು ಕಿವಿಗಡಚುತ್ತಿರುತ್ತದೆ. ತರಗೆಲೆಗಳು, ಪ್ಲಾಸ್ಟಿಕ್ ಚೀಲಗಳು, ಮದ್ಯದ ಬಾಟಲಿ, ಸ್ಯಾಚೆಟ್‌ಗಳು ಅಲಲ್ಲಿ ಕಾಣಸಿಗುತ್ತವೆ.
ಶತಮಾನ ಕಂಡ ಅಪರೂಪದ ಕಟ್ಟಡ: 1865ರ ಜನವರಿ 1ರಂದು ಬಂಟ್ವಾಳ ಪೇಟೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಕಟ್ಟಡವೊಂದರಲ್ಲಿ ಉಪನೋಂದಣಿ ಹಾಗೂ ವಿವಾಹ ನೋಂದಣಿ ಕಚೇರಿ ಆರಂಭಗೊಂಡಿತ್ತು. 1923ರ ಜಲಪ್ರಳಯದಲ್ಲಿ ಆ ಕಚೇರಿ ಕೊಚ್ಚಿ ಹೋಯಿತು. ಬಳಿಕ ಕಚೇರಿಯನ್ನು ಬಿ.ಸಿ.ರೋಡಿಗೆ ಸ್ಥಳಾಂತರಿಸಿ 1924ರಲ್ಲಿ ಹೊಸ ಕಚೇರಿ ನಿರ್ಮಿಸಲಾಯಿತು. ಪ್ರಸ್ತುತ ಈ ಕಟ್ಟಡ 102 ವರ್ಷಗಳನ್ನು ಪೂರೈಸಿದ ಸುದೀರ್ಘ ಇತಿಹಾಸ ಹೊಂದಿದೆ.

ತಾಲೂಕಾಡಳಿತ ಇಚ್ಛಾಶಕ್ತಿ ತೋರಲಿ

ಹಳೇ ಕಾಲದ ಮರದ ಬಾಗಿಲು, ಅಗಲವಾದ ಗೋಡೆ, ಕಿಟಕಿಗಳ ಬಳಿ ಇರುವ ಕಲ್ಲಿನ ಚಪ್ಪಡಿ, ಗಟ್ಟಿಮುಟ್ಟಾಗಿರುವ ಹೆಂಚಿನ ಛಾವಣಿ, ದಾಖಲೆಗಳನ್ನು ಸಂಗ್ರಹಿಸಿಡಲು ಹಳೆಕಾಲದ ಉಕ್ಕಿನ ಕಪಾಟು, ಹಳೆಯ ಫ್ಯಾನು ಈ ಕಟ್ಟಡದಲ್ಲಿದೆ. ನೂರು ವರ್ಷ ಹಳೆಯದಾದಾರೂ ಇನ್ನೂ ಬಿರುಕು ಕಾಣಿಸದ ಗೋಡೆಗಳು, ಗೆದ್ದಲು ಹಿಡಿಯದ ಮರದ ಛಾವಣಿಯನ್ನು ನೋಡಿದರೆ ಇನ್ನೂ ನೂರ್ಕಾಲ ಬಾಳಿಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇದನ್ನು ಉಳಿಸುವ ಇಚ್ಛಾಶಕ್ತಿಯನ್ನು ತಾಲೂಕಾಡಳಿತ ತೋರಬೇಕಿದೆ.

ಸ್ಮಾರಕವಾಗಿ ಸಂರಕ್ಷಣೆ ಅಗತ್ಯ


ಉಪನೋಂದಣಿ ಕಚೇರಿ ಸದ್ಯಕ್ಕೆ ಉಪಯೋಗ ಇಲ್ಲದಿದ್ದರೂ ಬ್ರಿಟಿಷರ ಕಾಲದ ಈ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ಸಂರಕ್ಷಿಸುವ ಅಗತ್ಯವಿದೆ ಎನ್ನುವ ಕೂಗು ಕೇಳಿ ಬಂದಿದೆ. ಕಟ್ಟಡದ ಗೋಡೆಗಳು, ಹೆಂಚಿನ ಛಾವಣಿ ಸುಭದ್ರವಾಗಿದ್ದು ಸರಿಯಾಗಿ ನಿರ್ವಹಣೆ ಮಾಡಿದರೆ ಇನ್ನೂ ಹಲವು ವರ್ಷಗಳ ಕಾಲ ಬಾಳಿಕೆ ಬರಲಿದೆ. ಶತಮಾನ ಪೂರೈಸಿರುವ ಬೆರಳೆಣಿಕೆಯ ಕಟ್ಟಡಗಳ ಪೈಕಿ ಇದೂ ಒಂದಾಗಿದ್ದು ಕಟ್ಟಡವನ್ನು ಸ್ಮಾರಕವಾಗಿ ಉಳಿಸುವ ನಿಟ್ಟಿನಲ್ಲಿ ತಾಲೂಕಾಡಳಿತ ಇತ್ತ ಗಮನ ಹರಿಸಬೇಕಾಗಿದೆ.

ಈ ಕಟ್ಟಡವನ್ನು ವಕೀಲರ ಸಂಘಕ್ಕೆ ಕೇಳಲಾಗಿತ್ತು. ಆದರೆ ಅದು ಸಾಧ್ಯವಾಗದ ಕಾರಣ ಬಂಟ್ವಾಳ ನ್ಯಾಯಾಲಯದ ವಿಸ್ತರಣೆಗಾಗಿ ಜಿಲ್ಲಾ ನ್ಯಾಯಾಧೀಶರು, ಹೈಕೋರ್ಟ್ ನ್ಯಾಯಾಧೀಶರ ಮೂಲಕ ಸರ್ಕಾರಕ್ಕೆ ಪತ್ರ ವ್ಯವಹಾರ ನಡೆಸಿದ್ದು ಅದು ಜಿಲ್ಲಾಧಿಕಾರಿ ಮುಖಾಂತರ ತಹಸೀಲ್ದಾರ್ ಅವರಿಗೆ ಬಂದಿದೆ. ಇನ್ನು ತಹಸೀಲ್ದಾರ್ ಜಿಲ್ಲಾಧಿಕಾರಿಯ ಮೂಲಕ ಸರ್ಕಾರಕ್ಕೆ ವರದಿ ನೀಡಬೇಕು.

— ರಿಚಾರ್ಡ್ ಕೋಸ್ತಾ ಎಂ. ಜಿಲ್ಲಾಧ್ಯಕ್ಷರು, ವಕೀಲರ ಸಂಘ, ದ.ಕ. ಜಿಲ್ಲೆ

ಸಬ್ ರಿಜಿಸ್ಟ್ರಾರ್ ಹಳೇ ಕಟ್ಟಡ ಉಪಯೋಗವಿಲ್ಲದೆ ವ್ಯರ್ಥವಾಗುತ್ತಿದೆ. ಇದರ ಪರಿಸರವನ್ನು ಸಾರ್ವಜನಿಕರು ಮಲ, ಮೂತ್ರ ವಿಸರ್ಜನೆ ಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾವು ಮೊದಲಾದ ವಿಷಕಾರಿ ಜಂತುಗಳು ವಸ್ತುಗಳ ತಾಣವಾಗಿದೆ.

— ದೇಜಪ್ಪ ಪೂಜಾರಿ, ಸಾರ್ವಜನಿಕರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net