ಯೇನೆಕಲ್ಲಿನ ಬೂದಿಪಳ್ಳ ಮಧುವನ ದೇವರಹಳ್ಳಿ ರಸ್ತೆಯ ಮಧ್ಯೆ ಭೂಕುಸಿತ ಸಂಭವಿಸಿ ರಸ್ತೆ ಸಂಪೂರ್ಣ ಕುಸಿದಿರುವುದು.
Published on:
Copied
Follow Us
ಸುಬ್ರಹ್ಮಣ್ಯ: ಮಂಗಳವಾರ ಬೆಳಗ್ಗಿನಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಗ್ರಾಮೀಣ ಭಾಗ ತತ್ತರಿಸಿದೆ. ಸುಬ್ರಹ್ಮಣ್ಯದ ಕಲ್ಲಪಣೆ ಸಮೀಪ ರಭಸವಾಗಿ ಹರಿದು ಬಂದ ಮಳೆ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಮನೆಯೊಂದರ ಗೋಡೆಗಳು ಕುಸಿದು, ಕಾಂಪೌಂಡ್ ಕುಸಿದು ಬಿದ್ದು ಭಾರಿ ನಷ್ಟ ಸಂಭವಿಸಿದೆ.
ವಿಷಯ ತಿಳಿದು ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ಡಾ.ರವಿ ಕಕ್ಕೆಪದವು ಮತ್ತು ಸದಸ್ಯರು ಸ್ಥಳಕ್ಕೆ ಆಗಮಿಸಿ ಕುಸಿದ ಗೋಡೆಗಳ ದುರಸ್ತಿ ಕಾರ್ಯದಲ್ಲಿ ತೊಡಗಿದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೋನಪ್ಪ ಡಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ವತಿಯಿಂದ ಪ್ರಕೃತಿ ವಿಕೋಪದಡಿ ಪರಿಹಾರಧನ ನೀಡುವುದಾಗಿ ಭರವಸೆ ನೀಡಿದರು.
ರಸ್ತೆ ಕುಸಿತ: ಯೇನೆಕಲ್ಲಿನ ಬೂದಿಪಳ್ಳ ಮಧುವನ ದೇವರಹಳ್ಳಿ ರಸ್ತೆಯ ಮಧ್ಯೆ ಭೂಕುಸಿತ ಸಂಭವಿಸಿ ರಸ್ತೆ ಸಂಪೂರ್ಣ ಕುಸಿದಿದೆ. ಪರಿಣಾಮ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೋನಪ್ಪ ಹಾಗೂ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಸದಸ್ಯ ದಿಲೀಪ್ ಉಪ್ಪಳಿಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.
ರಸ್ತೆ ಬದಿಯಲ್ಲಿ ಗುಡ್ಡ ಕುಸಿತ: ಸುಬ್ರಹ್ಮಣ್ಯ-ಸುಳ್ಯ ರಸ್ತೆಯ ಮಲೆಯಾಳ ಎಂಬಲ್ಲಿ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದೆ. ಮಳೆ ಇದೇ ರೀತಿ ಮುಂದುವರಿದರೆ ಗುಡ್ಡ ಮತ್ತಷ್ಟು ಕುಸಿದು ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಸುಬ್ರಹ್ಮಣ್ಯದ ದೇವರಗದ್ದೆ ರಸ್ತೆಯಲ್ಲೂ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.