ಸಿಡಿಲು ಸಹಿತ ಬಿರುಸಿನ ಮಳೆ

 ಬೆಳ್ತಂಗಡಿಯ ಕೂಡೋಲುಕೆರೆ ಎಂಬಲ್ಲಿ ಭಾರಿ ಮಳೆಗೆ ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ತೊಡಕುಂಟಾಯಿತು.
ಬೆಳ್ತಂಗಡಿಯ ಕೂಡೋಲುಕೆರೆ ಎಂಬಲ್ಲಿ ಭಾರಿ ಮಳೆಗೆ ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ತೊಡಕುಂಟಾಯಿತು.
Published on
ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ
ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಸುಳ್ಯ, ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ ಮೊದಲಾದೆಡೆ ಶನಿವಾರ ಸಂಜೆ ಸಿಡಿಲು, ಗಾಳಿ ಸಹಿತ ಬಿರುಸಿನ ಮಳೆ ಸುರಿಸಿದೆ.
ಬೆಳಗ್ಗೆಯಿಂದಲೇ ಮೋಡ, ವಿಪರೀತ ಸೆಕೆಯ ವಾತಾವರಣ ಕಂಡುಬಂದಿತ್ತಾದರೂ, ಸಂಜೆಯಾಗುತ್ತಿದ್ದಂತೆ ದಟ್ಟ ಮೋಡ ಕಾಣಿಸಿಕೊಂಡು, ಸಿಡಿಲಿನ ಅಬ್ಬರದೊಂದಿಗೆ ಮಳೆ ಆರಂಭವಾಯಿತು. ಅರ್ಧ ತಾಸಿಗೂ ಅಧಿಕ ಕಾಲ ಉತ್ತಮ ಮಳೆಯಾಗಿದೆ. ಹಲವು ದಿನಗಳಿಂದ 39 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಬಸವಳಿಯುತ್ತಿದ್ದ ಜನತೆಗೆ ಏಕಾಏಕಿ ಸುರಿದ ಮಳೆಯಿಂದ ತಣ್ಣನೆ ವಾತಾವರಣದ ಅನುಭವ ನೀಡಿತು.
ಕೆಲವು ಕೃಷಿಕರ ಅಂಗಳದಲ್ಲಿ ಒಣಗುತ್ತಿದ್ದ ಅಡಕೆ ಮಳೆಗೆ ಒದ್ದೆಯಾಗಿದೆ. ಮನೆ ರಿಪೇರಿ ಮಾಡಲು ಮಾಡು ತೆಗೆದಿಟ್ಟವರ ಮನೆಯೊಳಗೆ ನೀರು ತುಂಬಿದೆ. ಯಕ್ಷಗಾನ, ನೇಮೋತ್ಸವ ಹಾಗೂ ಮನೆಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಿಗೆ ಒಂದಷ್ಟು ಸಮಸ್ಯೆಯಾಗಿದೆ. ಏಕಾಏಕಿ ಸುರಿದ ಮಳೆಯಿಂದ ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿದ್ದವರು ರಸ್ತೆ ಬದಿಯ ಕಟ್ಟಡಗಳಲ್ಲಿ ಆಶ್ರಯ ಪಡೆಯುವಂತಾಯಿತು.

ಅಲ್ಲಲ್ಲಿ ಹಾನಿ

ಬಿರುಸಿನ ಗಾಳಿಗೆ ಜಿಲ್ಲೆಯ ವಿವಿಧ ಕಡೆ ಹಾನಿ ಉಂಟಾಗಿದೆ. ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ರಿಕ್ಷಾ ನಿಲ್ದಾಣಕ್ಕೆ ಅಳವಡಿಸಿದ್ದ ಮಾಡು ಮುರಿದು ಬಿದ್ದಿದೆ. ಇದರಿಂದ ಆಟೋಗಳಿಗೆ ಸಣ್ಣಪುಟ್ಟ ಹಾನಿ ಉಂಟಾಗಿದೆ. ಕೆಲವು ಕಡೆ ಮರ ಉರುಳಿ ಬಿದ್ದು ರಸ್ತೆ ಬಂದ್ ಆಗಿದೆ. ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದ ಪರಿಣಾಮ ಮೊಬೈಲ್ ನೆಟ್‌ವರ್ಕ್ ಕೂಡಾ ಕಡಿತಗೊಂಡಿತು. ಮಳೆಯಿಂದಾಗಿ ಅಡಕೆ ತೋಟಕ್ಕೆ ಎರಡು ಮೂರು ದಿನ ನೀರು ಹಾಕುವ ಅಗತ್ಯವಿಲ್ಲ. ಆದರೆ ಬಿಸಿಲು ಮತ್ತು ಮಳೆಯ ತಾಕಲಾಟದಿಂದ ಅಡಕೆ ಹಿಂಗಾರ ಕೊಳೆತು ಫಸಲು ನಷ್ಟವಾಗುವ ಆತಂಕವಿದೆ. ಗೇರು ಬೀಜವೂ ಕಪ್ಪಾಗುವುದರಿಂದ ದರ ಕುಸಿಯುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಏ.2ರ ತನಕ ಸಿಡಿಲು ಸಹಿತ ಹಗುರದಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉಡುಪಿಯಲ್ಲಿಯೂ ಮಳೆ

ಉಡುಪಿ: ಜಿಲ್ಲೆಯಲ್ಲಿ ಶನಿವಾರ ರಾತ್ರಿ ದಿಢೀರ್ ಸುರಿದ ಮಳೆ ತಂಪೆರೆಯಿತು. ಶನಿವಾರ ಬೆಳಗ್ಗೆಯಿಂದ ಸಂಜೆಯವರೆಗೂ ಮೋಡ-ಬಿಸಿಲಿನ ವಾತಾವರಣವಿತ್ತು. ರಾತ್ರಿ ಭಾರಿ ಪ್ರಮಾಣದಲ್ಲಿ ಮೋಡ ಕವಿದು, 7.30ರ ವೇಳೆಯಲ್ಲಿ ಗುಡುಗು ಹಾಗೂ ಸಿಡಿಲಿನ ಆರ್ಭಟ ಆರಂಭವಾಯಿತು. 7.45ಕ್ಕೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯತೊಡಗಿತು. ಕಳೆದ ಮೂರು ದಿನದಿಂದ ಉಡುಪಿಯಲ್ಲಿ ಗರಿಷ್ಠ 32 ಡಿ.ಸೆ. ಹಾಗೂ ಕನಿಷ್ಠ 26 ಡಿ.ಸೆ. ತಾಪಮಾನ ದಾಖಲಾಗಿತ್ತು.

ಬೆಳ್ತಂಗಡಿಯಲ್ಲಿ ಆಲಿಕಲ್ಲು ಮಳೆ

ಶನಿವಾರ ಮಧ್ಯಾಹ್ನದ ಬಳಿಕ ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಭಾಗಗಳಲ್ಲಿ ಗಾಳಿ, ಗುಡುಗು, ಸಿಡಿಲು ಸಹಿತ ಉತ್ತಮ ಮಳೆ ಸುರಿದಿದ್ದು ವ್ಯಾಪಕ ಹಾನಿಯೂ ಉಂಟಾಗಿದೆ. ಮಧ್ಯಾಹ್ನ 3ರ ಸುಮಾರಿಗೆ ಆರಂಭವಾದ ಮಳೆ ಸಂಜೆವರೆಗೂ ಮುಂದುವರಿಯಿತು. ಕೆಲವೆಡೆ ಲಘು ಪ್ರಮಾಣದಲ್ಲಿ ಆಲಿಕಲ್ಲು ಕೂಡ ಬಿದ್ದಿದೆ.
ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿ ಗಾಳಿಗೆ ರಿಕ್ಷಾ ಸ್ಟಾೃಂಡ್ ಧರಾಶಾಯಿಯಾಗಿ ರಿಕ್ಷಾಗೆ ಭಾಗಶಃ ಹಾನಿ ಉಂಟಾಗಿದೆ. ತೆಂಕಕಾರಂದೂರು ಗ್ರಾಮದ ಪೆರೊಡಿತ್ತಾಯನ ಕಟ್ಟೆ ಪರಿಸರದಲ್ಲಿ ಭಾರಿ ಗಾಳಿ ಬೀಸಿದ್ದು, 20ಕ್ಕಿಂತ ಅಧಿಕ ಮನೆಗಳ ಮೇಲೆ ಮರಗಳು ಬಿದ್ದು, ಶೀಟುಗಳು ಹಾರಿ ನಷ್ಟ ಉಂಟಾಗಿದೆ. ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ಮನೆಯೊಂದರ ಶೀಟುಗಳು ಹಾರಿವೆ. ಅಲ್ಲಲ್ಲಿ ಮರಗಳು ಬಿದ್ದು ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ 73ರ ಕಕ್ಕಿಂಜೆ ಪೇಟೆಯಲ್ಲಿ ವಿದ್ಯುತ್ ಕಂಬ ರಸ್ತೆಗೆ ಮುರಿದು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬೆಳಾಲು-ಉಜಿರೆ ರಸ್ತೆಯ ಕೂಡೋಲುಕೆರೆ ಎಂಬಲ್ಲಿ ಮರ ಮತ್ತು ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದು ಹಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಮೆಸ್ಕಾಂ, ಅರಣ್ಯ ಇಲಾಖೆ, ಸ್ಥಳೀಯರೊಂದಿಗೆ ಶ್ರೀಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಮರ ತೆರವಿಗೆ ಸಹಕರಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಉಜಿರೆ ಮೆಸ್ಕಾಂ ಉಪ ವಿಭಾಗದಲ್ಲಿ 15ಕ್ಕಿಂತ ಅಧಿಕ, ಬೆಳ್ತಂಗಡಿ ಉಪವಿಭಾಗದಲ್ಲಿ ಐದು ವಿದ್ಯುತ್ ಕಂಬಗಳು ಗಾಳಿಗೆ ಉರುಳಿ ಬಿದ್ದು ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಗಿದೆ. ಕೃಷಿ ತೋಟಗಳಲ್ಲಿ ನೂರಾರು ಅಡಕೆ, ರಬ್ಬರ್ ಮರಗಳು ಮುರಿದುಬಿದ್ದಿವೆ.

ಗುರುಪುರದಲ್ಲಿ ಬಿರುಗಾಳಿ ಮಳೆಗೆ ಭಾರೀ ಅನಾಹುತ

ಗುರುಪುರ ಆಸುಪಾಸಿನಲ್ಲಿ ಶನಿವಾರ ಸಂಜೆ ಏಕಾಏಕಿಯಾಗಿ ಸುರಿದ ಧಾರಾಕಾರ ಮಳೆ, ಗಾಳಿ, ಸಿಡಿಲು ಮಿಂಚಿಗೆ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದರೆ, ಕೆಲವು ಮನೆಗಳ ಹೆಂಚು ಹಾರಿ ಭಾರೀ ಅನಾಹುತ ಸಂಭವಿಸಿದೆ.
ಗಾಳಿ ಮಳೆಯಾಗುತ್ತಲೇ ವಿದ್ಯುತ್ ಸ್ಥಗಿತಗೊಂಡಿದ್ದು, ಗಾಳಿಯ ವೇಗಕ್ಕೆ ಮರಗಳ ಗೆಲ್ಲುಗಳು, ತೆಂಗಿನಕಾಯಿ ಹೆದ್ದಾರಿಗೆ ಬಿದ್ದಿವೆ. ವಿದ್ಯುತ್ ಕಂಬಗಳು, ತಂತಿಗಳು ಕಡಿದು ಬಿದ್ದು, ಚರಂಡಿರಹಿತ ರಸ್ತೆಗಳಲ್ಲಿ ಪ್ರವಾಹದಂತೆ ನೀರು ಹರಿದಿದೆ. ರಸ್ತೆಯಂಚುಗಳಲ್ಲಿ ಮತ್ತು ಗದ್ದೆಗಳಲ್ಲಿ ಕೆಸರು ನೀರು ತುಂಬಿದ್ದು, ಬಿರುಗಾಳಿಗೆ ಜನರು ಅಕ್ಷರಶಃ ಭೀತರಾಗಿದ್ದಾರೆ. ವಾಮಂಜೂರಿನಿಂದ ಗುರುಪುರ ಕೈಕಂಬದವರೆಗೆ ರಸ್ತೆ ಬದಿಯ ಅಲ್ಲಲ್ಲಿ ಅಳವಡಿಸಲಾದ ಫ್ಲೆಕ್ಸ್‌ಗಳು ನೆಲಗಚ್ಚಿವೆ.
ರಾಷ್ಟ್ರೀಯ ಹೆದ್ದಾರಿ 169 ಗುರುಪುರದಲ್ಲಿ ಸುಮಾರು ಅರ್ಧ ತಾಸು ಟ್ರಾಫಿಕ್ ಜಾಮ್ ಆಗಿದ್ದು, ಮೂಡುಬಿದಿರೆ ಮತ್ತು ಮಂಗಳೂರಿನತ್ತ ಒಳರಸ್ತೆಗಳಲ್ಲಿ ಸಾಗಿ ಬಂದ ವಾಹನಗಳು ಇಕ್ಕಟ್ಟಿನಲ್ಲಿ ಸಿಲುಕಿವೆ.

ಕಡಬದಲ್ಲಿ ಮಳೆಗೆ ಹಲವೆಡೆ ಹಾನಿ

ಕಡಬ: ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಶನಿವಾರ ಸುರಿದ ಗಾಳಿ ಮಳೆಗೆ ಅಪಾರ ಹಾನಿಯುಂಟಾಗಿದೆ. ಶರವೂರು ದೇವಾಲಯದ ಬ್ರಹ್ಮಕಲಶೋತ್ಸವಕ್ಕೆ ಅಳವಡಿಸಿರುವ ಬಂಟಿಂಗ್ಸ್, ಬ್ಯಾನರ್‌ಗಳಿಗೆ, ಕಜೆ ಎಂಬಲ್ಲಿ ಅಳವಡಿಸಿದ್ದ ಸ್ವಾಗತ ದ್ವಾರಕ್ಕೆ ಹಾನಿಯಾಗಿವೆ.
ಮಳೆಯಿಂದಾಗಿ ದೇವಸ್ಥಾನದ ಸುತ್ತಮುತ್ತ ಕೆಸರುಮಯವಾಗಿದ್ದು, ಸಂತೆ ವ್ಯಾಪರಿಗಳ ಅಂಗಡಿಗಳಿಗೆ ಹಾನಿಯುಂಟಾಗಿದೆ. ಗ್ರಾಮಾಂತರ ಭಾಗದಲ್ಲಿ ಹಲವೆಡೆ ಮರಗಳು ಉರುಳಿವೆ. ಕುಂತೂರು ಸಮೀಪದ ಕೋಚಕಟ್ಟೆ ಎಂಬಲ್ಲಿ ಮರ ಉರುಳಿ ವಿದ್ಯುತ್ ಪರಿವರ್ತಕ ಧರಶಾಯಿಯಾಗಿದ್ದು, ತಾಲೂಕಿನಾದ್ಯಂತ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net