

ಉಡುಪಿ: ನಗರದ ನಾರ್ತ್ ಸ್ಕೂಲ್ನಿಂದ ಶ್ರೀಕೃಷ್ಣ ಮಠದ ರಾಜಾಂಗಣ ಸಂಪರ್ಕಿಸುವ ಕಾಳಿಂಗ ಮರ್ಧನ ರಸ್ತೆ ಮಾರ್ಗದ ಸಮೀಪದಲ್ಲೇ ಇರುವ ನಗರಸಭೆಯ ಸಾರ್ವಜನಿಕ ಶೌಚಾಲಯದ ಬಳಿ ಕಸದ ರಾಶಿ ಬಿದ್ದಿದೆ.
ತಿಂಗಳಿಂದ ಕಸದ ರಾಶಿ ಇದ್ದು, ಹಲವು ದಿನಗಳಿಂದ ಪ್ಲಾಸ್ಟಿಕ್ ಬ್ಯಾಗಗಳ ಒಳಗೆ ಇರುವ ತ್ಯಾಜ್ಯದಿಂದ ದುರ್ನಾತ ಬರುತ್ತಿದೆ. ಪರಿಸರದಲ್ಲಿ ಅಸಹ್ಯ ವಾತಾವರಣ ನಿರ್ಮಾಣಗೊಂಡಿದೆ.
ಯಾತ್ರಿಕರಿಗೂ ಅಸಹ್ಯ
ಈ ರಸ್ತೆ ಮಾರ್ಗದ ಮೂಲಕವೇ ಪ್ರತಿನಿತ್ಯ ಶ್ರೀಕೃಷ್ಣ ಮಠಕ್ಕೆ ಬರುವ ಯಾತ್ರಿಕರು ಸಂಚರಿಸುತ್ತಾರೆ. ಸಮೀಪದಲ್ಲೇ ಶಾಲೆಯೂ ಇದ್ದು, ಕಸದ ರಾಶಿಯಿಂದಾಗಿ ವಿದ್ಯಾರ್ಥಿಗಳೂ ದುರ್ನಾತದ ವಾಸನೆ ಸೇವಿಸುವಂತಾಗಿದೆ. ಸ್ಥಳಿಯ ನಿವಾಸಿಗರಿಗೂ ತೊಂದರೆ ಆಗುತ್ತಿದೆ. ಪಾದಚಾರಿಗಳು ಮೂಗು ಮುಚ್ಚಿಕೊಂಡು ಸಂಚರಿಸಬೇಕಿದೆ.
ಕ್ರಮಕ್ಕೆ ಆಗ್ರಹ
ನಗರದ ಹೃದಯ ಭಾಗದಲ್ಲೇ ಈ ರೀತಿ ಕಸ ಎಸೆದಿರುವುದು ಅನಾಗರಿಕರ ಲಕ್ಷಣವಾಗಿದೆ. ಈ ತ್ಯಾಜ್ಯವನ್ನು ಎಸೆದವರು ಸ್ಥಳೀಯ ಅಂಗಡಿಯವರೇ ಅಥವಾ ಅನ್ನಯ ಕಡೆಯ ಕಸ ತಂದು ಇಲ್ಲಿ ಎಸೆಯುತ್ತಾರೆಯೇ ಎನ್ನುವುದನ್ನು ನಗರಸಭೆಯ ಪರಿಸರ ಅಧಿಕಾರಿಗಳು ಪತ್ತೆ ಮಾಡಬೇಕು. ಕಸದ ರಾಶಿ ಪರಿಶೀಲಿಸಿದರೆ ಅಲ್ಲಿರುವ ಕವರ್ ಅಥವಾ ಇನ್ನಾವುದೋ ಬಾಕ್ಸ್ಗಳ ಮೇಲೆ ಸಂಬಂಧಪಟ್ಟವರ ಮೊಬೈಲ್ ನಂಬರ್ ಲಭಿಸಬಹುದು. ಅಥವಾ ಸುತ್ತಮುತ್ತಲೂ ಸಿಸಿ ಕ್ಯಾಮರಾ ಇದ್ದಲ್ಲಿ ಅದನ್ನೂ ಪರಿಶೀಲಿಸಿ ಕಸ ಎಸೆದವರು ಯಾರೆಂಬುದನ್ನು ಪತ್ತೆ ಮಾಡಿ ದಂಡ ವಿಧಿಸಿಬೇಕು. ಮತ್ತೆ ಕಸ ಎಸೆಯದಂತೆ ಕಾನೂನು ಕ್ರಮವನ್ನೂ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.