ಉಡುಪಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಸಹಭಾಗಿತ್ವ (ಪಿಪಿಪಿ) ವಿರೋಧಿಸಿ ಹಾಗೂ ತಮಿಳುನಾಡು, ಕೇರಳ, ರಾಜಸ್ಥಾನ ರಾಜ್ಯಗಳಲ್ಲಿರುವಂತೆಯೇ ಕರ್ನಾಟಕದಲ್ಲಿರುವ ಎಲ್ಲ ಜಿಲ್ಲಾ, ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಬಗೆಯ ಚಿಕಿತ್ಸೆಗಳೂ ಉಚಿತವಾಗಿ ಸಿಗಬೇಕು. ಗುಣಮಟ್ಟದ ಔಷಧ ಬಡಜನರಿಗೆ ಲಭಿಸುವಂತಾಗಬೇಕೆಂದು ಆಗ್ರಹಿಸಿ ಫೆ.10ರಂದು ಬೆಳಗ್ಗೆ 11 ಗಂಟೆಗೆ ಮಣಿಪಾಲದ ಟೈಗರ್ ಸರ್ಕಲ್ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ 'ಆರೋಗ್ಯ ಹಕ್ಕಿನ ಜಾಥಾ' ನಡೆಸಲಿದ್ದೇವೆ ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ ಜಿಲ್ಲಾಧ್ಯಕ್ಷೆ ಸುಶೀಲಾ ನಾಡ ತಿಳಿಸಿದರು.
ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ (ಫೆ.7) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ ವಿಚಾರವಾಗಿ ರಾಜ್ಯಾದ್ಯಂತ 50ಕ್ಕೂ ಹೆಚ್ಚು ಸಂಘಟನೆಗಳು ಒಗ್ಗೂಡಿಕೊಂಡು ಫೆ.2ರಿಂದಲೇ ಪ್ರತಿಭಟನೆ ಆರಂಭಿಸಿದ್ದು, ಫೆ.17ರ ವರೆಗೂ ನಡೆಯಲಿದೆ ಎಂದರು.
ಖಾಸಗಿ ಆಸ್ಪತ್ರೆಗಳಿಗೆ ಚೀಟಿ
ರಾಜ್ಯಾದ್ಯಂತ ಇರುವ ಜಿಲ್ಲಾ ಹಾಗೂ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಸಿಗಬೇಕಾದ ಮೂಲ ಆರೋಗ್ಯ ಸೌಕರ್ಯ ಲಭಿಸುತ್ತಿಲ್ಲ. ಇಂದಿಗೂ ಖಾಸಗಿ ಆಸ್ಪತ್ರೆಗಳಿಗೆ ಚೀಟಿ ಬರೆದುಕೊಡುವ ಪದ್ಧತಿ ಮುಂದುವರಿದಿದೆ. ಸ್ಕ್ಯಾನಿಂಗ್, ಎಕ್ಸರೇ ಎಲ್ಲವೂ ಸಹ ಈ ಮೊದಲು ಉಚಿತವಾಗಿ ಲಭಿಸುತ್ತಿತ್ತು. ಆದರೀಗ, ರಾಜ್ಯಾದ್ಯಂತ ಬಡ ಜನರಿಗೆ ಉಚಿತ ಆರೋಗ್ಯ ಚಿಕಿತ್ಸೆ ಲಭಿಸದೆ ಇರುವುದರಿಂದ ಹಾಗೂ ದುಬಾರಿ ಹಣ ತೆತ್ತು ಖಾಸಗಿ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೆ ಸಾವನ್ನಪ್ಪುತ್ತಿದ್ದಾರೆ. ಸಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರುಗಳಿಲ್ಲ. ಶೇ.75 ಹುದ್ದೆ ಖಾಲಿಯೇ ಇದ್ದು, ಕಲಿಕಾ ವಿದ್ಯಾರ್ಥಿಗಳೇ ಸರ್ಕಾರಿ ಆಸ್ಪತ್ರೆಗಳಲ್ಲಿ ಕಂಡು ಬರುತ್ತಿದ್ದಾರೆ ಎಂದರು.
ತೀವ್ರ ಹೋರಾಟದ ಎಚ್ಚರಿಕೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಲಾಬಿ ಇರಬಾರದು. ಆದರೆ, ಕೇಂದ್ರ ನೀತಿ ಆಯೋಗದ ಶಿಫಾರಸಿನಂತೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆ ನಡೆಸುತ್ತಿರುವುದು ನಿಜಕ್ಕೂ ದುರ್ದೈವದ ಸಂಗತಿ. ತುಮಕೂರು, ವಿಜಯನಗರ, ಕೋಲಾರ, ದಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ ಮತ್ತು ದಾವಣೆಗೆರೆ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿದೆ. ಕೂಡಲೇ ಇದನ್ನು ಕೈಬಿಡಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ ಬಿರ್ತಿ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಂಯೋಜಕ ಕೆ.ಪುತ್ರ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ವಕ್ತಾರ ಇಕ್ಬಾಲ್ ಮನ್ನಾ ಉಪಸ್ಥಿತರಿದ್ದರು.
"
ರಾಜ್ಯದ ಬಡಜನರಿಗೆ ಆರೋಗ್ಯದ ಗ್ಯಾರಂಟಿಯನ್ನೇ ಕೊಡದೆ ಪಂಚ ಗ್ಯಾರಂಟಿ ಕೊಟ್ಟರೆ ಏನು ಪ್ರಯೋಜನ? ಜನರಿಗೆ ಆಯುಷ್ಯವೇ ಇಲ್ಲದಂತಾದರೆ ಪಂಚ ಗ್ಯಾರಂಟಿ ಇದ್ದೂ ಏನು ಲಾಭ? ಜನರಿಗೆ ಮೊದಲು ಆರೋಗ್ಯದ ಗ್ಯಾರಂಟಿ ನೀಡಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಬಗೆಯ ಆರೋಗ್ಯ ಸೇವೆಯನ್ನು ಸರಿಯಾಗಿ ನೀಡಿ.