ಜುಲೈ 16ಕ್ಕೆ ಸರ್ಕಾರಿ ಮಹಿಳಾ ಅಸ್ಪತ್ರೆ ನಿರ್ವಹಣೆ ಬಗ್ಗೆ ವಿಶೇಷ ಸಭೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್​ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡಕ್ಕೆ ದಿಢೀರ್​ ಭೇಟಿ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್​ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡಕ್ಕೆ ದಿಢೀರ್​ ಭೇಟಿ ನೀಡಿದರು.
Published on
ಉಡುಪಿ: ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸದ್ಯದ ಕಟ್ಟಡದ ದುರಸ್ತಿ ಹಾಗೂ ನಿರ್ವಹಣೆ, ಆಸ್ಪತ್ರೆಯ ಎದುರುಗಡೆ ತೋಡಲಾಗಿರುವ ಬೃಹತ್​ ಗುಂಡಿ ಮುಚ್ಚುವುದು ಸೇರಿದಂತೆ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸಲು ಜುಲೈ 16ರಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆಯಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್​ ಹೇಳಿದರು.
ಭಾನುವಾರ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡಕ್ಕೆ ದಿಢೀರ್​ ಭೇಟಿ ನೀಡಿ, ಕಾಮಗಾರಿ ವೀಕ್ಷಣೆ ನಡೆಸಿದರು. ಬಳಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ವಿದೇಶಿ ಮಾದರಿಯಲ್ಲಿ ಅಸ್ಪತ್ರೆ ನಿರ್ಮಾಣವಾಗಿದೆ. ಸರ್ಕಾರದಿಂದ ನಿರ್ವಹಣೆ ಕಷ್ಟ ಸಾಧ್ಯ. ಹೀಗಾಗಿ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಾಗೂ ನೂತನ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ ಅಗತ್ಯವಿರುವ ಅತ್ಯಾಧುನಿಕ ಸೌಲಭ್ಯಗಳ ಕುರಿತು ಚರ್ಚಿಸಲು ಇಲಾಖೆಯ ಆಯುಕ್ತರು, ಹಿರಿಯ ಅಧಿಕಾರಿಗಳು ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಲಿದೆ ಎಂದರು.
ಹೆರಿಗೆ ಪ್ರಮಾಣಕ್ಕೆ ಮೆಚ್ಚುಗೆ
ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಿಂಗಳಿಗೆ ಸರಾಸರಿ 150 ಕ್ಕೂ ಹೆಚ್ಚು ಹೆರಿಗೆಗಳಾಗುತ್ತಿವೆ. ಇದೇ ವೇಳೆ ತಾಲೂಕು ಆಸ್ಪತ್ರೆಗಳಲ್ಲಿ, ಗ್ರಾಮೀಣ ಹಾಗೂ ತಾಲೂಕು ಮಟ್ಟದಲ್ಲೂ ಹೆರಿಗೆ ಸೌಲಭ್ಯಗಳನ್ನು ಇನ್ನಷ್ಟು ಉತ್ತಮಪಡಿಸಲು ಅಗತ್ಯ ಸಲಹೆಗಳನ್ನು ನೀಡಿದರು. ಜಿಲ್ಲಾ ಆಸ್ಪತ್ರೆಗೆ ಪ್ರತಿನಿತ್ಯ ಸುಮಾರು 700 ರಿಂದ 800 ಮತ್ತು ಪ್ರತಿ ಸೋಮವಾರ 900ಕ್ಕೂ ಅಧಿಕ ಹೊರರೋಗಿಗಳು ಭೇಟಿ ನೀಡುತ್ತಿದ್ದಾರೆ. ಶಸ್ತ್ರ್ರಚಿಕಿತ್ಸಾ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರದಿಂದ ಸಿಗುವ ಎಲ್ಲಾ ನೆರವುಗಳನ್ನು ಪಡೆದುಕೊಳ್ಳುವಂತೆ ಸೂಚಿಸಿದರು.
ಸರ್ಕಾರಿ ಆಸ್ಪತ್ರೆಗಳ ಯಶೋಗಾಥೆ ಜನರಿಗೆ ತಲುಪಲಿ
ಸಾರ್ವಜನಿಕರಲ್ಲಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಧನಾತ್ಮಕ ಒಲವು ಮೂಡಿಸಲು ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ನಡೆಯುವ ಯಶಸ್ವಿ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಗಳು, ತನ್ಮೂಲಕ ರೋಗಿಗಳ ಜೀವನದಲ್ಲಾದ ಗುಣಾತ್ಮಕ ಬದಲಾವಣೆಗಳ ಬಗ್ಗೆ ಕನಿಷ್ಠ ತಿಂಗಳಿಗೆ ಎರಡು ಬಾರಿ ಜಿಲ್ಲಾ ಮಟ್ಟದಲ್ಲಿ ಆಸ್ಪತ್ರೆ ಮುಖ್ಯಸ್ಥರು ಪತ್ರಿಕಾಗೋಷ್ಠಿ ನಡೆಸಬೇಕು. ತಾಲೂಕು ಮಟ್ಟದಲ್ಲಿ ತಿಂಗಳಿಗೊಮ್ಮೆ ಪತ್ರಿಕಾ ಸಭೆ ನಡೆಸಿ ಮಾಧ್ಯಮಗಳಲ್ಲಿ ಪ್ರಕಟಿಸಬೇಕು. ಇದರಿಂದ ಜನರಲ್ಲಿ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲಿನ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಚ್​. ಅಶೋಕ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್​ ಹುಬ್ಬಳ್ಳಿ, ಜಿಲ್ಲಾ ರಕ್ತಕೇಂದ್ರದ ಡಾ. ವೀಣಾ, ಮಹಿಳಾ ಮತ್ತು ಮಕ್ಕಳ ಅಸ್ಪತ್ರೆ ಉಪ ಅಧೀಕ್ಷಕ ಡಾ. ಸಂದೀಪ್​ ಮೊದಲಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net