ಆರೋಗ್ಯ ಕೇಂದ್ರ ಕಟ್ಟಡ ಶಿಥಿಲ

 ಪ್ಲಾಸ್ಟಿಕ್ ಹೊದಿಕೆ ಹಾಕಿರುವ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ.
ಪ್ಲಾಸ್ಟಿಕ್ ಹೊದಿಕೆ ಹಾಕಿರುವ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ.
Published on
ಹರಿಪ್ರಸಾದ್ ನಂದಳಿಕೆ ಕಾರ್ಕಳ
ಸಾವಿರಾರು ಜನರ ಆರೋಗ್ಯ ಕಾಪಾಡುವ ಅಜೆಕಾರಿನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ಆರೋಗ್ಯವೇ ಇಂದು ಶೋಚನೀಯವಾಗಿದೆ. ಇಲ್ಲಿ ಸರ್ಕಾರಿ ಆಸ್ಪತ್ರೆ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲೂ ಅನಾಹುತ ಸಂಭವಿಸುವ ಭೀತಿಯಲ್ಲಿ ರೋಗಿಗಳು ಮತ್ತು ಸಿಬ್ಬಂದಿ ದಿನ ಕಳೆಯುವಂತಾಗಿದೆ.
ಮೇಲ್ಛಾವಣಿಯಲ್ಲಿ ಬಿರುಕು ಮೂಡಿದ್ದು ಮಳೆ ನೀರು ಆಸ್ಪತ್ರೆ ಒಳ ಪ್ರವೇಶಿಸುತ್ತಿದೆ. ಅಕಾಲಿಕ ಮಳೆ ಪರಿಣಾಮ ರೋಗಿಗಳು ಹಾಗೂ ಸಿಬ್ಬಂದಿ ಸಂಕಷ್ಟ ಎದುರಿಸುತ್ತಿದ್ದಾರೆ. ಅಕಾಲಿಕ ಮಳೆಯಲ್ಲೇ ಇಂತಹ ಸ್ಥಿತಿ ನಿರ್ಮಾಣವಾಗಿರುವುದರಿಂದ ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಆತಂಕ ಎದುರಾಗಿದೆ.

ಕುಸಿಯುವ ಆತಂಕ

ಮೇಲ್ಛಾವಣಿ ಹೆಂಚು ಹಾಗೂ ರೀಪುಗಳು ಹಾಳಾಗಿ ಕುಸಿಯುವ ಹಂತಕ್ಕೆ ತಲುಪಿದ್ದು, ಯಾವಾಗ ಬೇಕಾದರೂ ಕೆಳಗೆ ಬೀಳುವ ಅಪಾಯವಿದೆ. ಭಾರಿ ಗಾಳಿಮಳೆ ವೇಳೆ ನೀರು ಸೋರಿಕೆಯಿಂದ ವಿದ್ಯುತ್ ಉಪಕರಣಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಇಲ್ಲಿ ಔಷಧ ಹಾಗೂ ಇತರ ಸಾಮಗ್ರಿ ಸುರಕ್ಷಿತವಾಗಿ ಸಂಗ್ರಹಿಸಲು ಸೂಕ್ತ ವ್ಯವಸ್ಥೆಗಳಿಲ್ಲ. ಹಿರ್ಗಾನ, ಹೆರ್ಮುಂಡೆ, ಶಿರ್ಲಾಲು, ಕೆರುವಾಶೆ, ಕಡ್ತಲ ಸುತ್ತಮುತ್ತಲಿನ ಅನೇಕ ಗ್ರಾಮಗಳ ಜನರು ಈ ಆಸ್ಪತ್ರೆಯನ್ನೇ ಅವಲಂಬಿತರಾಗಿದ್ದಾರೆ. ಇಷ್ಟೊಂದು ಜನರಿಗೆ ಸೇವೆ ನೀಡುವ ಪ್ರಮುಖ ಕೇಂದ್ರವಾಗಿದ್ದರೂ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ.
ಪ್ಲಾಸ್ಟಿಕ್ ಹೊದಿಕೆ
1960ರಲ್ಲಿ ನಿರ್ಮಾಣಗೊಂಡ ಈ ಹಳೆಯ ಕಟ್ಟಡ ಜೀರ್ಣಾವಸ್ಥೆಗೆ ತಲುಪಿದ್ದು, ಮುಂದಿನ ಮಳೆಗಾಲ ಎದುರಿಸಲು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ. ಇತ್ತೀಚಿನ ಅಕಾಲಿಕ ಮಳೆಯಲ್ಲೇ ಆಸ್ಪತ್ರೆ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದ್ದು, ಆಸ್ಪತ್ರೆ ಒಳಭಾಗ ನೀರಿನಿಂದ ತುಂಬಿ ಹೋಗುತ್ತಿದೆ. ಮಳೆ ನೀರು ಒಳನುಗ್ಗದಂತೆ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹೊದಿಕೆ ಹಾಕಿ ಸೇವೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಡ್‌ಗಳು, ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣಗಳು ಹಾಗೂ ಚಿಕಿತ್ಸಾ ಉಪಕರಣಗಳು ನೀರಲ್ಲಿ ಒದ್ದೆಯಾಗುತ್ತಿದ್ದು, ರೋಗಿಗಳ ಚಿಕಿತ್ಸೆಗೆ ತೊಂದರೆ ಉಂಟಾಗಿದೆ. ಸ್ಥಳೀಯ ಗ್ರಾಪಂ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ವ್ಯವಸ್ಥೆ ಕಲ್ಪಿಸಿ, ಸ್ವಲ್ಪ ಮಟ್ಟಿನ ನೆರವು ಒದಗಿಸಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ.

ಹೊಸ ಕಟ್ಟಡ ಯಾವಾಗ?:

ನಿತ್ಯ ನೂರಾರು ರೋಗಿಗಳ ಪ್ರಯೋಜನಕ್ಕೆ ಬರುವ ಈ ಆರೋಗ್ಯ ಕೇಂದ್ರದ ಕಟ್ಟಡ ಸರಿಪಡಿಸುವಂತೆ ಹಾಗೂ ನೂತನ ಕಟ್ಟಡ ನಿರ್ಮಿಸುವ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸರ್ಕಾರ ಮಟ್ಟದಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಹಲವು ವರ್ಷಗಳಿಂದ ಈ ಹಳೆಯ ಕಟ್ಟಡವನ್ನು ನವೀಕರಿಸಲು ಅಥವಾ ಹೊಸದಾಗಿ ನಿರ್ಮಿಸಲು ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ದೊರಕಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

ಅಜೆಕಾರು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರಿಗೆ ಇದೊಂದೆ ಪ್ರಮುಖ ಆಸ್ಪತ್ರೆ. ಆದರೆ ಇಲ್ಲಿನ ಮೂಲಸೌಕರ್ಯ ಮಾತ್ರ ಶೂನ್ಯ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಭೇಟಿ ನೀಡಿ, ಹೊಸ ಕಟ್ಟಡ ನಿರ್ಮಿಸಲು ಅಥವಾ ತುರ್ತಾಗಿ ಮೇಲ್ಛಾವಣಿ ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕು.

ಆಸ್ಪತ್ರೆಗೆ ಬರುವುದು ಗುಣಮುಖರಾಗಲು. ಆದರೆ ಇಲ್ಲಿನ ಕಟ್ಟಡದ ಸ್ಥಿತಿ ನೋಡಿದರೆ ಪ್ರಾಣ ಉಳಿಸಿಕೊಂಡು ಹೋಗುವುದೇ ದೊಡ್ಡ ಸಾಹಸದಂತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತಕ್ಷಣ ಎಚ್ಚೆತ್ತುಕೊಳ್ಳಬೇಕು.

ಈ ಬಗ್ಗೆ ಈಗಾಗಲೇ ಸರ್ಕಾಕ್ಕೆ ಮನವಿ ಮಾಡಲಾಗಿದ್ದು, ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಎಂಆರ್‌ಪಿಎಲ್ ಸಂಸ್ಥೆ ಸಿಎಸ್‌ಆರ್ ನಿಧಿಗಳಿಂದ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಹಾಗೂ ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಲು ಕ್ರಮ ವಹಿಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ಎಂಆರ್‌ಪಿಎಲ್‌ಗೆ ಮಾಹಿತಿ ನೀಡಲಾಗಿದೆ. ಸದ್ಯದಲ್ಲೇ ರಿಪೇರಿ ಕಾರ್ಯಗಳು ಆರಂಭವಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net