ಪ್ರದೀಪ ಆತ್ಮಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ವಹಿಸಿ

ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಯಾನಂದ ಹೆಗ್ಡೆ ಮಾತನಾಡಿದರು. ದಿಲೀಪ ಪೂಜಾರಿ, ಸಹನಾ ಕುಂದರ್​, ಸಚಿನ್​ ಪೂಜಾರಿ, ದೇವು ಪೂಜಾರಿ ಇದ್ದರು.
ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಯಾನಂದ ಹೆಗ್ಡೆ ಮಾತನಾಡಿದರು. ದಿಲೀಪ ಪೂಜಾರಿ, ಸಹನಾ ಕುಂದರ್​, ಸಚಿನ್​ ಪೂಜಾರಿ, ದೇವು ಪೂಜಾರಿ ಇದ್ದರು.
Published on: 

* ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿಯಾನಂದ ಹೆಗ್ಡೆ ಆಗ್ರಹ

* ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯಿಂದ ಸುಳ್ಳು ಮಾಹಿತಿ ಆರೋಪ

* ನ.11ರಂದು ಉಡುಪಿಯಲ್ಲಿ 'ಬೃಹತ್​ ಜನಾಗ್ರಹ ಸಭೆ' ಆಯೋಜನೆ

ಉಡುಪಿ: ಹಲ್ಲೆಯಿಂದಾಗಿ ಗಾಯಗೊಂಡು ಉಡುಪಿಯ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಸಂದರ್ಭದಲ್ಲಿಯೇ ಪೆರ್ಡೂರಿನ ಯುವಕ ಪ್ರದೀಪ ಪೂಜಾರಿ ಆತ್ಮಹತ್ಯೆ ಮಾಡಿಕೊಡ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯೇ ಸಮಾಜಕ್ಕೆ ಸುಳ್ಳು ಹಾಗೂ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ. ನೈಜ ಆರೋಪಿಗಳನ್ನು ಬಂಧಿಸದೆ, ಸಮರ್ಪಕ ತನಿಖೆಯನ್ನೂ ಮಾಡದ ಅವರಿಂದ ನಮಗೆ ನ್ಯಾಯ ಸಿಗುವ ನಂಬಿಕೆ ಇಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಒಡಿ ಅಥವಾ ಸಿಬಿಐಗೆ ವಹಿಸಬೇಕು ಎಂದು ಪೆರ್ಡೂರು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿಯಾನಂದ ಹೆಗ್ಡೆ ಆಗ್ರಹಿಸಿದರು.

ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ನ.7) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಪೊಲೀಸ್​ ವರಿಷ್ಠರು ಮೂರು ದಿನದೊಳಗಾಗಿ ಎಲ್ಲ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ್ದರು. ಆದರೆ, ಘಟನೆ ನಡೆದು 8 ದಿನ ಕಳೆದರೂ ನೈಜ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಯಾರದ್ದೋ ಒತ್ತಡಕ್ಕೆ ಎಸ್ಪಿ ಒಳಗಾಗಿದ್ದು ನಮಗೆ ನ್ಯಾಯ ಸಿಗುವ ಲಕ್ಷಣ ಇಲ್ಲ. ಹಿರಿಯಡ್ಕ ಠಾಣೆ ಎಸ್​ಐ ಅಮಾನತು ಮಾಡಬೇಕು ಎಂಬ ಬೇಡಿಕೆಯೊಂದಿಗೆ ನ.11ರಂದು ಉಡುಪಿಯಲ್ಲಿ 'ಬೃಹತ್​ ಜನಾಗ್ರಹ ಸಭೆ' ಆಯೋಜಿಸಿದ್ದೇವೆ. ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.

ನನ್ನ ತಮ್ಮ ಸಾಯುತ್ತಿರಲಿಲ್ಲ

ಮೃತ ಪ್ರದೀಪ ಪೂಜಾರಿಯ ಸಹೋದರ ದಿಲೀಪ ಪೂಜಾರಿ ಮಾತನಾಡಿ, ಎಸ್ಪಿಯರು ತಮಗೆ ಬೇಕಾದಂತೆ ಹಾಗೂ ಇಲಾಖೆ, ಯುವತಿ ಮನೆಯವರ ಪರವಾಗಿ ಮಾತನಾಡುತ್ತಿದ್ದಾರೆ. ಯುವತಿಯನ್ನು ಕಲ್ಲೆತ್ತಿ ಹತ್ಯೆ ಮಾಡಲು ನನ್ನ ತಮ್ಮ ಪ್ರದೀಪ ಹೋಗಿದ್ದ ಎಂದು ನೋಡಿದವರಂತೆ ಸುಳ್ಳು ಹೇಳುವುದೇಕೆ? ಯುವತಿಗೆ ಹಲ್ಲೆ ನಡೆಸಿದ್ದು ಮೈಮೇಲೆ ಗಾಯವಿರುವುದಾಗಿ ವೈದ್ಯಕೀಯ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ ಎಂದು ಅಸತ್ಯ ನುಡಿದಿದ್ದಾರೆ. ನಮ್ಮ ಬಳಿಯೂ ಸಹ ಅದೇ ವೈದ್ಯಕೀಯ ಪ್ರಮಾಣಪತ್ರವಿದ್ದು ಅದರಲ್ಲಿ ಯುವತಿಯ ಮೈಮೇಲೆ ಯಾವುದೇ ಗಾಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೂ ಸಮಾಜಕ್ಕೆ ತಪ್ಪು ಮಾಹಿತಿ ನೀಡುತ್ತಿರುವುದೇಕೆ? ನನ್ನ ತಮ್ಮ ಯುವತಿ ಮನೆಯವರು ನಡೆಸಿದ್ದ ಹಲ್ಲೆಯಿಂದಾಗಿ ಗಾಯಗೊಂಡು ಹಿರಿಯಡ್ಕ ಠಾಣೆಗೆ ದೂರು ಕೊಡಲು ಹೋಗಿದ್ದರೂ ಅಲ್ಲಿನ ಎಸ್​ಐ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಆತ ನೊಂದು ಆತ್ಮಹತ್ಯೆ ಮಾಡಿಕೊಂಡ ಬಳಿಕ ಆ ದಿನ ಸಂಜೆ ದೂರು ದಾಖಲಿಸಿಕೊಂಡಿದ್ದಾರೆ. ಮೊದಲೇ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದರೆ ನನ್ನ ತಮ್ಮ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದರು.

ಎಸ್​ಐ ಅಮಾನತು ಮಾಡಿ

ವಕೀಲೆ ಸಹನಾ ಕುಂದರ್​ ಮಾತನಾಡಿ, ಮೃತಪಟ್ಟ ಪ್ರದೀಪ ಹಾಗೂ ಯುವತಿ ಕಳೆದ 8 ವರ್ಷದಿಂದ ಪ್ರೀತಿಸುತ್ತಿದ್ದರು. ಆಕೆಯೂ ಸಹ ಪ್ರದಿಪನನ್ನೇ ಮದುವೆಯಾಗುವುದಾಗಿ ಹೇಳಿಕೊಂಡಿದ್ದಳು. ಪ್ರದೀಪನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಲಾಗಿದೆ. ಅದರ ವಿಚಾರಣೆ ನಡೆಯುತ್ತಿದ್ದು, ಆತ ಅತ್ಯಾಚಾರಿ ಎಂದು ತೀರ್ಪು ಬಂದಿಲ್ಲ. ಆದರೂ ಎಸ್ಪಿಯವರು ಯುವತಿಯನ್ನು ರೇಪ್​ ಮಾಡಿದ್ದಾನೆ ಎನ್ನುವುದು ಎಷ್ಟು ಸರಿ? ಇವರೇ ಎಲ್ಲವನ್ನೂ ನಿರ್ಧರಿಸುವುದಿದ್ದರೆ ಕೋರ್ಟ್​ ಏಕೆ ಬೇಕು? ಪ್ರದೀಪ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಎಂಟು ಮಂದಿಯ ವಿರುದ್ಧ ದೂರು ನೀಡಿದ್ದೇವೆ. ಆದರೆ, ಅವರನ್ನು ಬಂಧಿಸಿದೆ ಉತ್ತರ ಭಾರತದ ಯಾರೋ ಇಬ್ಬರನ್ನು ಬಂಧಿಸಿದ್ದು, ಅವರು ಯಾರೆಂದು ಈವರೆಗೂ ಮುಖ ತೋರಿಸಿಲ್ಲ. ಹಿರಿಯಡಕ್ಕ ಠಾಣೆಯಲ್ಲಿ ಪ್ರದೀಪನ ದೂರು ದಾಖಲಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಇಬ್ಬರು ಪೇದೆಯನ್ನು ಅಮಾನತು ಮಾಡಲಾಗಿದೆ. ಎಸ್​ಐ ಅನ್ನು ಬೇರಡೆ ವರ್ಗಾಯಿಸಿದ್ದಾರೆ. ಅವರನ್ನೇಕೆ ಅಮಾನತು ಮಾಡಿಲ್ಲ. ಕೂಡಲೇ ಅವರನ್ನೂ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿನ್​ ಪೂಜಾರಿ, ದೇವು ಪೂಜಾರಿ ಇದ್ದರು.

ಯುವತಿ ಮೃತ ಪ್ರದೀಪನ ವಿರುದ್ಧ ಈ ಹಿಂದೆ ಉಡುಪಿಯ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾಳೆ. ಆದರೆ, ಆಕೆ ಹಿರಿಯಡ್ಕ ಠಾಣೆಗೆ ಹೋಗಿದ್ದೇಕೆ? ಅವಳಿಗೆ ಅಲ್ಲೇನು ಕೆಲಸ? ಪ್ರದೀಪ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭದ ಹಾಗೂ ಆತ ಹಿರಿಯಡ್ಕ ಠಾಣೆಗೆ ದೂರು ನೀಡಲು ಹೋಗಿದ್ದ ಸಂದರ್ಭದ ಸಿಸಿ ಟಿವಿ ಫೂಟೇಜ್​ ನೀಡಲು ಆರ್​ಟಿಐ ಮೂಲಕ ಅರ್ಜಿ ಸಲ್ಲಿಸಿದ್ದೇವೆ.
ಸಹನಾ ಕುಂದರ್. ವಕೀಲೆ.