ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತ

 ಬೆಡ್ ಹಾಕಿದ ಬಳಿಕ ಅರ್ಧಕ್ಕೇ ನಿಂತಿರುವ ರಸ್ತೆ ಕಾಮಗಾರಿ.
ಬೆಡ್ ಹಾಕಿದ ಬಳಿಕ ಅರ್ಧಕ್ಕೇ ನಿಂತಿರುವ ರಸ್ತೆ ಕಾಮಗಾರಿ.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸ್ಥಳೀಯಾಡಳಿತದ ನಿಧಿಯಿಂದ ರಸ್ತೆಗೆ ಅನುದಾನ ಮಂಜೂರಾಯಿತು. ಅಧ್ಯಕ್ಷರ ಸುಪರ್ದಿಯಲ್ಲಿ ಬೆಡ್ ಹಾಕಿದ್ದೂ ಆಯಿತು. ಆದರೆ ತಮಗೆ ಬೇಕಾದ ಕಡೆ ಕಾಮಗಾರಿ ನಡೆಸಲು ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ತಗಾದೆ ತೆಗೆದ ಹಿನ್ನೆಲೆಯಲ್ಲಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಮಳೆಗಾಲದಲ್ಲಿ ವಾಹನ ಸಂಚಾರ ಸಂಕಷ್ಟ ತಂದೊಡ್ಡಿದೆ. ಇದು ಕೋಟೆಕಾರ್ ಪಪಂ ವ್ಯಾಪ್ತಿಯ ವಾರ್ಡೊಂದರ ರಸ್ತೆಯ ಕಥೆ!
ಕೋಟೆಕಾರ್ ಪಪಂ ವ್ಯಾಪ್ತಿಯ 11ನೇ ವಾರ್ಡ್ ನಡಾರ್ ಮಡ್ಯಾರ್ ರಾಮಾಶ್ರಯ ರಸ್ತೆ ಕಾಂಕ್ರೀಟ್ ಕಾಮಗಾರಿಗಾಗಿ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕ್ರಿಯಾ ಯೋಜನೆ ರೂಪಿಸಿ ಅಧ್ಯಕ್ಷರು 5 ಲಕ್ಷ ರೂ. ಅನುದಾನ ಮಂಜೂರುಗೊಳಿಸಿದ್ದರು. ಅದರಂತೆ ಹತ್ತು ದಿನಗಳ ಹಿಂದೆ ಅಧ್ಯಕ್ಷರ ಸಮ್ಮುಖದಲ್ಲಿ ಗುದ್ದಲಿಪೂಜೆ ನೆರವೇರಿಸಲಾಗಿತ್ತು.
ಕೋಟೆಕಾರ್-ದೇರಳಕಟ್ಟೆ ಮುಖ್ಯ ರಸ್ತೆಯ ನಡುವೆ ಸಿಗುವ ಈ ಒಳರಸ್ತೆ 750 ಮೀ. ಉದ್ದವಿದ್ದು ಇಲ್ಲಿ 60ರಷ್ಟು ಮನೆಗಳಿವೆ. ರಸ್ತೆ ಮಧ್ಯಭಾಗದಲ್ಲಿ ಹಿಂದೆ 90 ಮೀಟರ್‌ನಷ್ಟು ಕಾಂಕ್ರೀಟ್ ಹಾಕಲಾಗಿದೆ. ಮುಖ್ಯ ರಸ್ತೆಯಿಂದಲೇ 95 ಮೀಟರ್‌ವರೆಗೆ ಕಾಂಕ್ರೀಟ್ ಹಾಕುವ ನಿಟ್ಟಿನಲ್ಲಿ ಐದು ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿತ್ತು.
ಗುತ್ತಿಗೆದಾರ ಕಾಮಗಾರಿ ಆರಂಭಿಸಿ ಮುಖ್ಯ ರಸ್ತೆ ಬಳಿ 72 ಮೀಟರ್‌ವರೆಗೆ ಬೆಡ್ ಹಾಕಿದ್ದು ಬಳಿಕ ಮಧ್ಯ ಭಾಗದಲ್ಲಿ ನಾಲ್ಕು ಮನೆಗಳಿರುವ 36 ಮೀಟರ್‌ನಷ್ಟು ಬಿಟ್ಟು ನಂತರದ ಭಾಗದಲ್ಲಿ 23 ಮೀಟರ್ ರಸ್ತೆ ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕಾಮಗಾರಿಯಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷರು, ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಬೆಡ್ ಹಾಕಿದ ಸ್ಥಿತಿಯಲ್ಲೇ ಕಾಮಗಾರಿ ನಿಲ್ಲಿಸಲಾಗಿದೆ. ಸದ್ಯ ಮಳೆಗಾಲ ಯಾವ ಸಂದರ್ಭದಲ್ಲೂ ಆರಂಭಗೊಳ್ಳುವ ಸೂಚನೆ ಇದೆ. ರಸ್ತೆ ಕಾಮಗಾರಿ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇದರಿಂದ ಈ ಬಾರಿಯ ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ ಎನ್ನುವ ಆತಂಕ ಸ್ಥಳೀಯರದ್ದು.

ಎಂಟು ವರ್ಷಗಳ ಹಿಂದೆ ನಾನು ಕೌನ್ಸಿಲರ್ ಆಗಿದ್ದ ಸಂದರ್ಭ ರಸ್ತೆಗೆ ಕಾಂಕ್ರೀಟ್ ಹಾಕಿಸಿದ್ದೆ. ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಐದು ಲಕ್ಷ ಅನುದಾನ ಇಟ್ಟು ಮೂರು ದಿನ ಕೆಲಸ ಮಾಡಿಸಿದ ಬಳಿಕ ರಾಜಕೀಯ, ಧರ್ಮ ತರಲಾಗಿದೆ. ಮುಂದಕ್ಕೆ ಯಾರು ಬೇಕಾದರೂ ಕಾಮಗಾರಿ ಮಾಡಬಹುದು. ಸ್ಥಳೀಯ ವಾರ್ಡ್‌ನಲ್ಲಿ ನಡೆಯುವ ಯಾವುದೇ ಕಾಮಗಾರಿಗೂ ಕೌನ್ಸಿಲರ್ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.

ಐದು ಲಕ್ಷ ಅನುದಾನದಲ್ಲಿ 95 ಮೀ. ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಯಬೇಕಿತ್ತು. ಆದರೆ ಅಧ್ಯಕ್ಷರು ನನ್ನ ಗಮನಕ್ಕೆ ತಾರದೆ ಕಾರ್ಯಕರ್ತರ ಜತೆ ಗುದ್ದಲಿಪೂಜೆ ನಡೆಸಿದ್ದಲ್ಲದೆ ಮಧ್ಯಭಾಗ ಬಿಟ್ಟು ಕಾಮಗಾರಿ ನಡೆಸಲು ಮುಂದಾಗಿದ್ದರಿಂದ ಸ್ಥಳೀಯರಲ್ಲಿ ಗೊಂದಲಕ್ಕೆ ಕಾರಣವಾಗಿ ಕೆಲಸ ನಿಂತಿದೆ. ಮಳೆಗಾಲಕ್ಕೆ ಮೊದಲು ಕಾಮಗಾರಿ ಮುಗಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net