

ಉಡುಪಿ: ಭಾರತವು ಹೈಡ್ರೋಜನ್ ಚಾಲಿತ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಈಗಾಗಲೇ ಪ್ರಯೋಗ ನಡೆಸುತ್ತಿದೆ. ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್ ಭಾರತಕ್ಕೆ ಅಪಾರವಾಗಿ ಆಸರೆಯಾಗಲಿದೆ. ನಮೋ ಗ್ರೀನ್ ರೈಲ್ ದೇಶದ ಮೊದಲ ಹೈಡ್ರೋಜನ್ ಇಂಧನ ಕೋಶ ಆಧಾರಿತ, ಶೂನ್ಯ ಇಂಗಾಲ ಯೋಜನೆಯಾಗಿದೆ. ತೈಲದ ಮೇಲಿನ ದೇಶ-ವಿದೇಶದ ಅವಲಂಬನೆಯೂ ಕಡಿಮೆಯಾಗಿ ಇಂಗಾಲದ ಹೊರಸೂಸುವಿಕೆ ತಗ್ಗಲೂ ಸಹಕಾರಿಯಾಗಲಿದೆ ಎಂದು ಕೈಗಾರಿಕಾ ರಸಾಯನಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಬಿ. ಎಸ್. ಶೇರಿಗಾರ ಅಭಿಪ್ರಾಯಪಟ್ಟರು.
ಉಡುಪಿ ಅಜ್ಜರಕಾಡಿನ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿಜಿಎವಿ ಸಭಾಂಗಣದಲ್ಲಿ ಕಾಲೇಜ್ನ ರಸಾಯನಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಶನಿವಾರ (ಅ.3) ಆಯೋಜಿಸಿದ್ದ 'ಇನ್ ಫ್ಲಾಮೇಬಲ್ ಏರ್ ಟು ಗ್ರೀನ್ ಹೈಡ್ರೋಜನ್: ದಿ ಜರ್ನಿ ಟು ಆ್ಯನ್ ಅಲ್ಟ್ರನೇಟ್ ಫ್ಯೂಯಲ್' ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಐಕ್ಯೂಎಸಿ ಸಂಯೋಜಕಿ ಪ್ರೊ. ಶ್ರೀಮತಿ ಅಡಿಗ, ಬಾಲಕೃಷ್ಣ ಬಾಯರಿ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪುನೀತ್ ತೆಂಡುಲ್ಕರ್ ಸ್ವಾಗತಿಸಿದರು. ಉಪನ್ಯಾಸಕಿ ಅಮೃತಾ ವಂದಿಸಿದರು. ವಿದ್ಯಾರ್ಥಿನಿ ಶ್ರಾವಣಿ ಕಾರ್ಯಕ್ರಮ ನಿರೂಪಿಸಿದರು.